ಎಚ್.ಡಿ.ಕೋಟೆ: ಸರಗೂರು ಪಟ್ಟಣದ ಬಾಲ್ ಫೀಲ್ಡ್ ಕ್ರೀಡಾಂಗಣದಲ್ಲಿ ಮಾ.15ರಿಂದ 17ರವರೆಗೆ ಮೂರು ದಿನಗಳ ಕಾಲ ಹೈನುಗಾರಿಕೆ ಮತ್ತು ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ವೈದ್ಯ ಡಾ.ಡೆನ್ನಿಸ್ ತಿಳಿಸಿದರು.
ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಪಶುಪಾಲನೆ ಪಶು ವೈದ್ಯಕೀಯ ಸೇವೆಗಳ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸುತ್ತೂರು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಹೈನುಗಾರಿಕೆ ಮತ್ತು ಕೃಷಿ ಮೇಳ ನಡೆಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
15ರಂದು ಶಾಸಕ ಅನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಿವಾಸ್, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಜಿಲ್ಲಾ ನಿರ್ದೇಶಕ ಡಾ.ನಾಗರಾಜು, ಟೈಟನ್ ಕಂಪನಿ ಮುಖ್ಯ ಸುಸ್ಥಿರ ಅಧಿಕಾರಿ ಎನ್.ಇ.ಶ್ರೀಧರ್, ಮೈಮುಲ್ ಅಧ್ಯಕ್ಷ ಚೆಲುವರಾಜು, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯಕ್, ಮೈಮುಲ್ ನಿರ್ದೇಶಕ ಕೆ.ಈರೇಗೌಡ ಭಾಗವಹಿಸುವರು. ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮೂಳೆ ಮತ್ತು ಕೀಲು ರೋಗ ತಜ್ಞ ಡಾ.ಎಂ.ಆರ್.ಸೀತಾರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ ಹೈನುಗಾರಿಕೆ ಕುರಿತು ಚರ್ಚೆ ಮತ್ತು ದೈನಂದಿನ ಜೀವನದಲ್ಲಿ ಹೈನುಗಾರಿಕೆ ಪ್ರಾಮುಖ್ಯ ಬಗ್ಗೆ ಸರಗೂರು ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ವೈ.ಡಿ.ರಾಜಣ್ಣ ಉಪನ್ಯಾಸ ನೀಡಲಿದ್ದಾರೆ. ನಂತರ ಹೈನುಗಾರಿಕೆ ಇಲಾಖೆಯಿಂದ ಸಿಗುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಮೈಸೂರು ಜಿಲ್ಲಾ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವೆಗಳ ಉಪನಿರ್ದೇಶಕ ಡಾ.ನಾಗರಾಜ್ ಮಾಹಿತಿ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಮೂಳೆ ಮತ್ತು ಕೀಲು ತಜ್ಞರಾದ ಡಾ.ಸೀತಾರಾಮ್ ಅವರು ಹೈನುಗಾರಿಕೆಯಲ್ಲಿನ ಅವಕಾಶಗಳು ಮತ್ತು ಸವಾಲುಗಳು ಬಗ್ಗೆ ಸಲಹೆ ನೀಡಲಿದ್ದಾರೆ.
16ರಂದು ಹೈನುಗಾರಿಕೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯಲ್ಲಿ ಅವಕಾಶಗಳ ಬಗ್ಗೆ ಕೃಷಿ ತಜ್ಞ ಡಾ.ದೀಪಕ್ ತಿಳಿಸಲಿದ್ದಾರೆ. 17ರಂದು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಉದ್ಘಾಟಿಸುವರು. ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಿವಾಸ್, ಸರಗೂರು ತಹಸೀಲ್ದಾರ್ ಮೋಹನ್ ಕುಮಾರಿ, ಮೈಮುಲ್ ನಿರ್ದೇಶಕಿ ದಾಕ್ಷಾಯಿಣಿ, ಸರಸು, ನಿವೃತ್ತ ಐಪಿಎಸ್ ಅಧಿಕಾರಿ ಚಮನ್ ಲಾಲ್, ಡಾ.ಶ್ರೀದೇವಿ ಸೀತಾರಾಮ್ ಭಾಗವಹಿಸುವರು.
ಪಿ.ಡಿ.ನಾಯಕ್, ನಿಂಗರಾಜು, ಅಕ್ಷತ್ ಇದ್ದರು.