ಕೋವಿಡ್ ವಿರುದ್ಧ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಎಆರ್ಡಿಒ) ಅಭಿವೃದ್ಧಿ ಪಡಿಸಿರುವ ಕರೊನಾ ನಿರೋಧಕ ಔಷಧ ತುರ್ತು ಸಂದರ್ಭದ ಬಳಕೆಗೆ ಮಂಗಳವಾರದಿಂದಲೇ ಲಭ್ಯವಾಗಲಿದೆ. ಈಗಾಗಲೇ 2ನೇ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಗೆ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿರುವುದರಿಂದ ಮೇ 11ರಿಂದಲೇ ಸೋಂಕಿತರ ಚಿಕಿತ್ಸೆಗೆ ಮುಕ್ತವಾಗಲಿದೆ ಎಂದು ಡಿಆರ್ಡಿಒ ಮುಖ್ಯಸ್ಥ ಜಿ.ಸತೀಶ್ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಖಾಸಗಿ ಸುದ್ದಿವಾಹಿನಿಗೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ.
ದೇಹದಲ್ಲಿ ವೈರಾಣುಗಳ ಬಲ ಕುಂದಿಸಿ, ಇತರ ಭಾಗಗಳಿಗೆ ಹಬ್ಬದಂತೆ ರಕ್ಷಾಕವಚ ನಿರ್ವಿುಸುವ ಈ ಔಷಧ ಕೋವಿಡ್ ಸೋಂಕಿತರ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಆಸ್ಪತ್ರೆಗಳಲ್ಲೂ ಯಾವುದೇ ಅಡಚಣೆ ಇಲ್ಲದಂತೆ ಸೋಂಕಿತರಿಗೆ ಲಭಿಸುವಂತೆ ಮಾಡಲು ತಂಡಗಳು ಸಿದ್ಧತೆ ಮಾಡಿವೆ. ಈ ಔಷಧ ಬಳಸಿದ ಮೂರೇ ದಿನದಲ್ಲಿ ಸೋಂಕಿತರು ಚೇತರಿಸಿಕೊಳ್ಳುವ ಸಾಮರ್ಥ್ಯ ಇದಕ್ಕಿದೆ. ಕ್ಲಿನಿಕಲ್ ಟ್ರಯಲ್ನಲ್ಲಿ ಇದು ಸಾಬೀತಾಗಿದೆ ಎಂದಿದ್ದಾರೆ.
ಫಲಿತಾಂಶವೇನು?: ಕರೊನಾ ವಿರುದ್ಧ ಸಿದ್ಧಪಡಿಸಲಾಗಿರುವ 2-ಡಿಜೆ ಔಷಧ ಬಳಸಿದ ಸೋಂಕಿತರು ವೇಗವಾಗಿ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ವೈದ್ಯಕೀಯ ಆಮ್ಲಜನಕ ಬಳಕೆಯ ಅಗತ್ಯವೂ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಇದು ಭವಿಷ್ಯದಲ್ಲಿ ಚಿಕಿತ್ಸೆಗೆ ಹೆಚ್ಚಿನ ನೆರವಾಗಲಿದೆ ಎಂದು ಎಂದು ಡಿಸಿಜಿಐ ಖಚಿತಪಡಿಸಿದೆ.
2 ಡಿಜೆ ರೂಪ ಯಾವುದು?: ಪುಡಿಯ ರೂಪದಲ್ಲಿರುವ ಈ ಔಷಧವನ್ನು ಸೋಂಕಿತರು ಯಾವುದೇ ಭಯವಿಲ್ಲದೆ ನೀರಿನಲ್ಲಿ ಬೆರೆಸಿ ಕುಡಿಯಬಹುದು. ಇದು ಕೋವಿಡ್ ರೋಗಿಗಳು ಗುಣಮುಖರಾಗಿ ಶೀಘ್ರ ಆಸ್ಪತ್ರೆಯಿಂದ ಹೊರಬರಲು ನೆರವಾಗುತ್ತಿದೆ.
ಕಾರ್ಯನಿರ್ವಹಣೆ ಹೇಗೆ?: ಕರೊನಾ ಸೋಂಕಿತರ ಜೀವಕೋಶಗಳನ್ನು ಸೇರುವ ಈ ಔಷಧ ಅಲ್ಲಿನ ವೈರಸ್ನ ಸಂಶ್ಲೇಷಣೆ ಮತ್ತು ಶಕ್ತಿ ಉತ್ಪಾದನೆಗೆ ತಡೆಯೊಡ್ಡುತ್ತಿದೆ. ಹಾಗೂ ಅದು ಬೆಳವಣಿಗೆ ಆಗದಂತೆ ನಿಗ್ರಹಿಸುತ್ತದೆ.
ಎಲ್ಲೆಲ್ಲಿ ಪ್ರಯೋಗ?: ಕರ್ನಾಟಕ , ಉತ್ತರಪ್ರದೇಶ, ಆಂಧ್ರಪ್ರದೇಶ ಸೇರಿ ಒಟ್ಟು 10 ರಾಜ್ಯಗಳಲ್ಲಿನ ಸೋಂಕಿತರ ಮೇಲೆ ಪ್ರಯೋಗ ನಡೆಸಲಾಗಿದೆ. ಇದರ ಯಶಸ್ಸೇ ಚಿಕಿತ್ಸೆ ಅಭಿವೃದ್ಧಿಪಡಿಸಲು ಪ್ರೇರಣೆ ಆಗಿದೆ ಎಂದು ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ (ಡಿಸಿಜೆಐ)ಕ್ಕೆ ವರದಿ ಸಲ್ಲಿಕೆಯಾಗಿದೆ.