ಸರಗೂರು ತಾಲೂಕಿನ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನ. 
ನ್ಯೂಸ್

ನಾಳೆಯಿಂದ ಬೇಲದಕುಪ್ಪೆ ಮಹದೇಶ್ವರ ಜಾತ್ರೆ

ಸರಗೂರು: ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಲದಕುಪ್ಪೆಯಲ್ಲಿ ಕಾರ್ತಿಕ ಮಾಸದ ಅಂಗವಾಗಿ ನ.20ರಿಂದ 23ರವರೆಗೆ ನಾಲ್ಕು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ.
ತಾಲೂಕಿನ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ಜಾತ್ರೆ, ಹಾಲರವಿ ಉತ್ಸವ, ಕೊಂಡೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಮಿತಿ ಸಿದ್ಧತೆ ಮಾಡಿಕೊಂಡಿದೆ. ಬೇಲದಕುಪ್ಪೆ ಮಹದೇಶ್ವರ ಜಾತ್ರಾ ಮಹೋತ್ಸವದ ಧಾರ್ಮಿಕ ಕಾರ್ಯಗಳ ತಯಾರಿ ಆರಂಭವಾಗಿದ್ದು, ಮಹದೇಶ್ವರ ಸ್ವಾಮಿ ಭಕ್ತ ಮಂಡಳಿಯಿಂದ ಸಕಲ ಸಿದ್ಧತೆ ಭರದಿಂದ ಸಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಗಿತ್ತು, ಈ ಬಾರಿ ವಿಜೃಂಭಣೆಯಿಂದ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ.


ದೇಗುಲದ ಆವರಣ ಸ್ವಚ್ಛಗೊಳಿಸಿದ್ದು ಸುಣ್ಣ ಬಣ್ಣ ಬಳಿದು, ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ದೇವಾಲಯ ಆವರಣದಲ್ಲಿ ಮಕ್ಕಳ ಆಟಿಕೆ ಹಾಗೂ ಗೃಹೋಪಯೋಗಿ ವಸ್ತು ಮಳಿಗೆ ತೆರೆಯಲಾಗಿದೆ. ರಥೋತ್ಸವ ದಿನ ಆಗಮಿಸುವ ಸಾವಿರಾರು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅನ್ನಸಂತರ್ಪಣೆ ನಡೆಸಲು ಶಾಮಿಯಾನ ಹಾಗೂ ಸರತಿ ಸಾಲಿನ ವ್ಯವಸ್ಥೆ ಕಲ್ಪಿಸಿದೆ.

21ರಂದು ಕೆರೆಯಲ್ಲಿ ವಿವಿಧ ಪೂಜೆಗಳನ್ನು ಸಲ್ಲಿಸಿದ ನಂತರ ಹಾಲರವಿ ಮೂಲಕ ಸ್ವಾಮಿಯನ್ನು ದೇವಾಲಯದ ಉದ್ಭವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ. ರಾತ್ರಿ ಎಣ್ಣೆಮಜ್ಜನ ಮತ್ತು ಪ್ರಸಾದ ವಿನಯೋಗ ನಡೆಯುತ್ತದೆ. 20ರಂದು ಬೆಳಗ್ಗೆಯಿಂದ ವಿವಿಧ ಪೂಜೆ, ರಾತ್ರಿ ಹರಿಕಥೆ ನಡೆಯುತ್ತದೆ. ಬೆಳಗ್ಗೆ ಹಾಲರವಿ ಸೇವೆ, ವೀರಗಾಸೆ ನೃತ್ಯ, ಪೂಜಾ ಕುಣಿತ, ಕೋಲಾಟ, ಕಂಸಾಳೆ ಪ್ರದರ್ಶನ ನಡೆಯುತ್ತದೆ. ನಂತರ ದೇವಸ್ಥಾನದ ಮುಂಭಾಗದಲ್ಲಿ ಕೊಂಡೋತ್ಸವ ನಡೆಯುತ್ತದೆ. 22ರಂದು ಬೆಳಗ್ಗೆ ರಥೋತ್ಸವ ನಡೆಯಲಿದೆ. 23ರಂದು ಸಂಜೆ ವಿವಿಧ ಕಲಾತಂಡಗಳೊಂದಿಗೆ ದೇವರ ಮೆರವಣಿಗೆ ಜರುಗಲಿದೆ.
ದೇವಸ್ಥಾನಕ್ಕೆ ಹೋಗಿಬರಲು ಎತ್ತಿನ ಬಂಡಿ, ದ್ವಿಚಕ್ರ ವಾಹನ ಹಾಗೂ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ 80 ಬಸ್‌ಗಳನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಕಲ್ಪಿಸಲಾಗಿದೆ. ದೇವಾಲಯ ಆವರಣ ಸುತ್ತ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಆನಂದ್ ತಿಳಿಸಿದ್ದಾರೆ.

ಮಹದೇಶ್ವರ ದೇವಸ್ಥಾನ ಹೆಡಿಯಾಲ ವ್ಯಾಪ್ತಿ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಕೋರ್ ಪ್ರದೇಶದಲ್ಲಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವನ್ಯ ಮೃಗಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಿಸಿಎಫ್ ರಮೇಶ್‌ಕುಮಾರ್ ತಿಳಿಸಿದ್ದಾರೆ.

ಬಂಡೀಪುರದಲ್ಲಿ ಹುಲಿಗಳು ಮತ್ತು ಆನೆಗಳ ಸಾಂದ್ರತೆ ಹೆಚ್ಚಾಗಿದೆ. ಚಳಿಗಾಲ ಕಾಡು ಪ್ರಾಣಿಗಳ ಸಂಯೋಗದ ಕಾಲವಾಗಿದ್ದು, ಚಲನೆಯಲ್ಲಿರುತ್ತವೆ. ಹೀಗಾಗಿ ಅರಣ್ಯ ಪ್ರದೇಶದ ಒಳಗಡೆಗೆ ಪ್ರವೇಶ ಇಲ್ಲ. ದೇವಸ್ಥಾನಕ್ಕೆ ಜನರು ಹೋಗಿ ಪೂಜೆ ಸಲ್ಲಿಸಿ ಬರಬೇಕು ಎಂದು ವಲಯ ಅರಣ್ಯಾಧಿಕಾರಿ ಪರಮೇಶ್ ತಿಳಿಸಿದ್ದಾರೆ.