ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಭಾನುವಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅನಾವರಣ ಮಾಡಿದರು.
- 1924ರಲ್ಲಿ ಮೈಸೂರು ಮೆಡಿಕಲ್ ಕಾಲೇಜು ಸ್ಥಾಪಿಸಿ ವೈದ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಮಹಾರಾಜರಿಗೆ ಗೌರವ ಸಲ್ಲಿಸಿದ್ದು ಶತಮಾನೋತ್ಸವ ಸಂಭ್ರಮವನ್ನು ಇಮ್ಮಡಿಗೊಳಿಸಿತು. 1962ನೇ ಸಾಲಿನ ವಿದ್ಯಾರ್ಥಿಗಳು ಪ್ರತಿಮೆ ನಿರ್ಮಿಸಿದ್ದಾರೆ. ಶಿಲ್ಪಿ ಜಗನ್ನಾಥ್ ಆಚಾರ್ ಅವರು ನಾಲ್ವಡಿ ಅವರ ಭವ್ಯ ಮೂರ್ತಿಯನ್ನು ಕೆತ್ತಿದ್ದಾರೆ.
- ನಾಲ್ವಡಿ ಸ್ಮರಿಸಿ: ಮೈಸೂರು ಮೆಡಿಕಲ್ ಕಾಲೇಜಿಗೆ ಸೇರ್ಪಡೆಯಾಗುವ ಹೊಸ ವಿದ್ಯಾರ್ಥಿಗಳಿಗೆ ನಾಲ್ವಡಿ ಅವರ ಸಾಧನೆಯನ್ನು ತಿಳಿಸಲು ಸಂಸ್ಥಾಪಕರ ದಿನ ಆಚರಿಸಬೇಕು. ಯಾವುದೇ ಕಾರ್ಯಕ್ರಮಕ್ಕೂ ಮುನ್ನ ನಾಲ್ವಡಿ ಅವರಿಗೆ ಗೌರವ ಸಲ್ಲಿಸಬೇಕೆಂದು ಹಿರಿಯ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಈ ಮನವಿಗೆ ಕಾಲೇಜಿನ ಡೀನ್ ಡಾ.ಕೆ.ಆರ್. ದಾಕ್ಷಾಯಿಣಿ ಒಪ್ಪಿಗೆ ಸೂಚಿಸಿದರು.
- ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜಾಪಿತರಾಗಿ ಆಳ್ವಿಕೆ ನಡೆಸಿದರು. 11ನೇ ವಯಸ್ಸಿಗೆ ಪಟ್ಟಾಭಿಷೇಕ ಮಾಡಲಾಯಿತು. ವಾಣಿವಿಲಾಸ ಸನ್ನಿಧಾನದಲ್ಲಿ ಅವರು ರಾಜಪ್ರತಿನಿಧಿಯಾಗಿ ಅಧಿಕಾರ ವಹಿಸಿಕೊಂಡರು. 18ನೇ ವಯಸ್ಸಿಗೆ ಬ್ರಿಟಿಷರಿಂದ ರಾಜ್ಯಾಧಿಕಾರ ಸ್ವೀಕರಿಸುವಾಗ ನಿರ್ಭೀತಿ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುತ್ತೇನೆಂದು ನೀಡಿದ ವಚನವನ್ನು ಅನುಷ್ಠಾನಕ್ಕೆ ತಂದರು ಎಂದು ಹೇಳಿದರು.
- ಭಾರತ ಕೃಷಿ ಪ್ರಧಾನ ರಾಷ್ಟ್ರವಾದರೂ ಕ್ಷಾಮದಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಮನಗಂಡು ಕುಶಲಕಲೆ, ಕೈಗಾರಿಕೆಗೆ ಒತ್ತು ಕೊಡಬೇಕೆಂದು ಕಾರ್ಯೋನ್ಮುಖರಾದರು. ಶಿಕ್ಷಣ, ವೈದ್ಯಕೀಯ, ಕಲೆ ಸಹಿತವಾಗಿ ಎಲ್ಲ ಕ್ಷೇತ್ರಗಳಲ್ಲಿ ಪ್ರಖರವಾದ ಅಭಿವೃದ್ಧಿ ಮಾಡಿದರು ಎಂದು ನುಡಿದರು.
- ನಾಲ್ವಡಿ ಅವರು ಕಾಲವಾದಾಗ ಮಹಾತ್ಮ ಗಾಂಧೀಜಿ, ನಾಲ್ವಡಿ ಅವರಂತಹ ರಾಜರಿದ್ದರೆ ದೇಶಕ್ಕೆ ಸ್ವಾತಂತ್ರೃವೇ ಅಗತ್ಯವಿಲ್ಲ ಎಂದು ಹೇಳದ್ದ ಮಾತುಗಳು ಅವರ ಸಾಧನೆಗೆ ಹಿಡಿದ ಕನ್ನಡಿ ಎಂದು ಅಭಿಪ್ರಾಯಪಟ್ಟರು.
- ಮಧುಮೇಹ ತಜ್ಞ ಡಾ.ವಿ.ಲಕ್ಷ್ಮೀನಾರಾಯಣ ಮಾತನಾಡಿ, ದೇಶಕ್ಕೆ ಸಂವಿಧಾನ ಸಮರ್ಪಿಸಿದ ದಿನ. ಸಾಮಾಜಿಕ ನ್ಯಾಯ ಕಾನೂನು ಬದ್ಧವಾದ ದಿನದಂದೇ ನಾಲ್ವಡಿ ಪ್ರತಿಮೆ ಅನಾವರಣ ಮಾಡಿದ್ದೇವೆ. ಏಕೆಂದರೆ, ಸಂವಿಧಾನ ಜಾರಿಯಾಗುವ 9 ವರ್ಷಗಳ ಮುನ್ನವೇ ಮೈಸೂರು ರಾಜ್ಯದಲ್ಲಿ ಸಮಾನತೆಯ ಬೆಳಕು ಚೆಲ್ಲಿದ ಮಹನೀಯರು ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದರು.
- ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಗೌ.ಅಧ್ಯಕ್ಷ ಡಾ.ಸಿ.ಡಿ. ಶ್ರೀನಿವಾಸಮೂರ್ತಿ, ವಿದೇಶ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಕೆ.ಜೆ. ಶ್ರೀನಿವಾಸ್, ವಿಶಾಂತ ಕುಲಪತಿ ಡಾ.ಕೆ.ಚಿದಾನಂದಗೌಡ, ತಾರಿಣಿ ಚಿದಾನಂದಗೌಡ, ಹಿರಿಯ ಸಾಹಿತಿ ಡಾ.ಪ್ರಧಾನ ಗುರುದತ್ತ, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ವಿವಿಧ ಕ್ಷೇತ್ರದ ಸಾಧಕರಾದ ಡಾ.ಉದಯಶಂಕರ್, ಡಾ.ಚಂದ್ರಶೇಖರ ಶೆಟ್ಟಿ, ಡಾ.ಎಂ.ಎಸ್. ಶೇಖರ್, ಡಾ.ನಾಗರಾಜ ರಾವ್, ಬಾ.ವೆ. ಶ್ರೀಧರ್, ಡಾ.ಬಸನಗೌಡಪ್ಪ, ಡಾ.ಬಿ.ವಿ. ರಾಜಗೋಪಾಲ್, ಡಾ.ದಿನೇಶ್, ಡಾ.ಶಶಿಧರ್, ಡಾ.ಎಂ.ಜಿ.ಆರ್. ಅರಸ್, ಡಾ.ಶೋಭಾ ಇತರರು ಇದ್ದರು.