ಬೆಂಗಳೂರು : ಮಂಗಳೂರು- ಕಾರ್ಕಳ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ನೀಡಲಾಗಿರುವ ವಿಚಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅರ್ಥಾತ್ ‘ನೂತನ ಸಮಗ್ರ ಏರಿಯಾ ಯೋಜನೆ-2019’ರ ಅನ್ವಯ ಸಂಚಾರ ಬೇಡಿಕೆ ಕುರಿತು ಜಂಟಿ ಸಮೀಕ್ಷೆ ಆಗುವ ತನಕ ಹೊಸ ಪರವಾನಿಗೆಯ ಕಾರ್ಯಾಚರಣೆಗೆ ಅವಕಾಶ ಇರುವುದಿಲ್ಲ.
ಈ ಸಂಬಂಧ ಖಾಸಗಿ ಬಸ್ ಮಾಲೀಕರಾದ ಉಡುಪಿ ಜಿಲ್ಲೆ ಕಾಪು ನಿವಾಸಿ ವಿಜಯಾ ಎಚ್. ತಂತ್ರಿ ಹಾಗೂ ಇತರರು ಸಲ್ಲಿಸಿದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಮಂಗಳೂರು- ಕಾರ್ಕಳದ ನಡುವೆ ನಾಲ್ಕು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ದಿನದಲ್ಲಿ ಐದು ಸಿಂಗಲ್ ಟ್ರಿಪ್‌ಗಳಿಗೆ ಹೊಸದಾಗಿ ಪರ್ಮಿಟ್ ಮಂಜೂರು ಮಾಡಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು 2025ರ ಮಾ 17ರಂದು ಅಧಿಸೂಚನೆ ಹೊರಡಿಸಿದ್ದರು. ಈ ಅಧಿಸೂಚನೆಯು ‘ನೂತನ ಸಮಗ್ರ ಏರಿಯಾ ಯೋಜನೆ-2019’ಕ್ಕೆ ತದ್ವಿರುದ್ಧವಾಗಿದ್ದು, ಖಾಸಗಿ ಬಸ್ ಮಾಲೀಕರ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಅರ್ಜಿದಾರರ ವಾದವಾಗಿತ್ತು. ಅದರಂತೆ ಜಂಟಿ ಸಮೀಕ್ಷೆ ನಡೆದು ವೇಳಾಪಟ್ಟಿ ನಿಗದಿಯಾಗುವ ತನಕ ಹೊಸ ಪರವಾನಿಗೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಹೇಳಿದೆ.
ಈ ಅರ್ಜಿಯು ಏಪ್ರಿಲ್ 7ರಂದು ವಿಚಾರಣೆಗೆ ಬಂದಿದ್ದಾಗ, ಅರ್ಜಿ ಸಂಬಂಧ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ, ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು. ಹೊಸ ಪರ್ಮಿಟ್ ನೀಡುವ ಮೊದಲು ‘ನೂತನ ಸಮಗ್ರ ಏರಿಯಾ ಯೋಜನೆ-2019ರ’ ಅನ್ವಯ ಸಾರಿಗೆ ಬೇಡಿಕೆ ಕುರಿತು ಜಂಟಿ ಸಮೀಕ್ಷೆ ನಡೆಸಲಾಗಿದೆಯೇ ಎಂಬ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅರ್ಜಿದಾರರ ಪರ ವಕೀಲ ಅಭಿಜಿತ್ ಹಾರನಹಳ್ಳಿ ವಕಾಲತ್ತು ವಹಿಸಿದ್ದರು. ಹಿರಿಯ ವಕೀಲ ವಿಕ್ರಂ ಹುಯಿಲಗೋಳ ವಾದ ಮಂಡಿಸಿದರು.