ನ್ಯೂಸ್

ನಾಯಿಗಳ ದಾಳಿಗೆ ಜಿಂಕೆ ಬಲಿ

ನಂಜನಗೂಡು: ತಾಲೂಕಿನ ಕೊತ್ತನಹಳ್ಳಿ ಶನೈಶ್ಚರ ದೇವಸ್ಥಾನದ ಹಿಂಭಾಗದ ಜಮೀನಿನಲ್ಲಿ ನಾಯಿಗಳ ದಾಳಿಯಿಂದ ಜಿಂಕೆ ಮೃತಪಟ್ಟಿದೆ.

ಸ್ಥಳಕ್ಕೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸದೆ ಜಿಂಕೆಯ ಕಳೇಬರ ಸಾಗಿಸುತ್ತಿದ್ದ ಅರಣ್ಯ ಇಲಾಖೆ ಗುತ್ತಿಗೆ ನೌಕರರನ್ನು ಹಂಚಿಪುರ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಏಕಾಏಕಿ ಕಳೇಬರವನ್ನು ಎಲ್ಲಿಗೆ ಕೊಂಡೊಯ್ಯತ್ತಿದ್ದೀರಿ. ಒಂದು ವೇಳೆ ರೈತರು ಈ ಕೆಲಸ ಮಾಡಿದ್ದರೆ ಅವರ ಮೇಲೆ ದೂರು ದಾಖಲು ಮಾಡುತ್ತಿದ್ದೀರಿ. ಸ್ಥಳಕ್ಕೆ ಮೇಲಧಿಕಾರಿಗಳು ಬರುವವರೆಗೂ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಮಧ್ಯಾಹ್ನದವರೆಗೂ ಪಟ್ಟು ಹಿಡಿದರು.

ಸ್ಥಳಕ್ಕೆ ಬಂಡೀಪುರ ಉಪ ವಿಭಾಗದ ಎಸಿಎಫ್, ಓಂಕಾರ್ ವಲಯ ಅರಣ್ಯ ಅಧಿಕಾರಿ ಸತೀಶ್, ಡಿಆರ್‌ಎಫ್‌ಒ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಮನವೊಲಿಸಿದರು. ಬಳಿಕ ಗುಂಡ್ಲುಪೇಟೆ ಪಶು ವೈದ್ಯಧಿಕಾರಿ ವಾಸಿಮ್ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದರು.