ನ್ಯೂಸ್

ನಾಮಸ್ಮರಣೆ ಮಹತ್ವ ಸಾರಿದ ಸಾಧಕಿ; ಇಂದು ವಿಠಾಬಾಯಿ ಜಯಂತಿ

| ವಿಶ್ವನಾಥ ಚಕ್ರವರ್ತಿ

ಬಾಲ್ಯದಲ್ಲಿಯೇ ಅಭಂಗ, ಭಜನೆ ಹಾಡುವುದು, ಜ್ಞಾನೇಶ್ವರಿ, ಭಾಗವತ, ಹರಿಪಾಠ ಶ್ರವಣದಲ್ಲಿ ತನ್ಮಯಳಾಗುತ್ತಿದ್ದ ಸಂತಮಾತಾ ವಿಠಾಬಾಯಿ ತನ್ನ 14ರ ವಯಸ್ಸಿನಲ್ಲಿಯೇ, ಪಾಂಡುರಂಗ, ಚಿದಂಬರ ಮಹಾಸ್ವಾಮಿಗಳ ದರ್ಶನ ಪಡೆದ ಮಹಾನ್ ಸಾಧಕಿ. ನರಸಿಂಹ ಅವತಾರದಲ್ಲಿ ಪದ್ಮಿನಿ, ರಾಮಾವತಾರದಲ್ಲಿ ಮಂಥರೆ, ಕೃಷ್ಣಾವತಾರದಲ್ಲಿ ಕುಬ್ಜಾ ಎಂಬ ಗೌಳಿಯಾಗಿ, ವಿಠ್ಠಲಾವತಾರದಲ್ಲಿ ಜನಾಬಾಯಿಯಾಗಿ, ಚಿದಂಬರ ಅವತಾರದಲ್ಲಿ ವಿಠಾಬಾಯಿಯಾಗಿ ಭಗವಂತನ ಅನನ್ಯ ಸೇವೆಮಾಡಿದ ಭಗವದ್ ಭಕ್ತೆ.

ಪಾಂಡುರಂಗನ ದಿವ್ಯಕ್ಷೇತ್ರವಾದ ಪಂಢರಪುರದಲ್ಲಿ ರಾಮಪ್ಪ ನಾಯಕ-ಸಂತೂಬಾಯಿ ಎಂಬ ವಿಠ್ಠಲನ ಪರಮಭಕ್ತ ದಂಪತಿ ವಾಸವಾಗಿದ್ದರು. ಇವರು ಸಂತಾನವಾಗಲಿಲ್ಲವೆಂಬ ಕೊರಗಿನಲ್ಲಿದ್ದರು. ಒಂದುರಾತ್ರಿ ಈ ದಂಪತಿಗೆ ಒಂದೇರೀತಿಯಾದ ಸ್ವಪ್ನ ದೃಷ್ಟಾಂತವಾಯಿತು. ಮಹಾನ್ ಸಂತಳ ಜನನವಾಗುವುದೆಂದು ಪಾಂಡುರಂಗನ ಅನುಗ್ರಹವಾಯಿತು. ಶಕೆ 1714 ಆಷಾಢ ಚತುರ್ದಶಿಯಂದು (ಆಗಸ್ಟ್ 07) ಜನಿಸಿದ ಮಗುವಿಗೆ ‘ವಿಠಾಬಾಯಿ’ ಎಂದು ನಾಮಕರಣ ಮಾಡಿದರು. ಸಾಮಾನ್ಯ ಬಾಲಕಿಯರಂತಲ್ಲದ ವಿಠಾಬಾಯಿ ವಿಠ್ಠಲನ ಮೂರ್ತಿಗೆ ಪೂಜೆ ಮಾಡು ವುದು, ಸದಾ ಅದರೊಂದಿಗೆ ಆಟ, ಪಾಠದಲ್ಲಿ ತಲ್ಲೀನಳಾಗುತ್ತಿದ್ದದ್ದನ್ನು ಕಂಡು ಸಂತ-ಮಹಾಂತರು ಆನಂದ, ಆಶ್ಚರ್ಯ ಗೊಂಡರು. ಪಾಂಡುರಂಗನ ಧ್ಯಾನ, ಭಾವಸಮಾಧಿಯ ನಿಜಾನಂದದ ಸ್ಢಿತಿಯಲ್ಲಿ ಕಾಲ ಕಳೆಯುತ್ತಿದ್ದವಳಿಗೆ ಮನೆಯಲ್ಲಿ ಮದುವೆಗೆ ಒತ್ತಾಯ ಬಂದಾಗ ಸಂಕಷ್ಟ ಒದಗಿತು. ಪ್ರಪಂಚದ ಕಡೆ ಆಸಕ್ತಿಯೇ ಇಲ್ಲದ ವಿಠಾಬಾಯಿಗೆ ಪಂಢರಪುರದ ಆಗರ್ಭ ಶ್ರೀಮಂತನೊಂದಿಗೆ ಒಲ್ಲದ ಮದುವೆ ಆಯಿತು. ಮೊದಲ ರಾತ್ರಿ ಗಂಡನಿಗೆ ದೇಹ ಸಮರ್ಪಣೆ ಮಾಡದೆ ವಿಠ್ಠಲನ ಮೂರ್ತಿಯೊಂದಿಗೆ ಮಧ್ಯರಾತ್ರಿ ಮನೆ ಬಿಟ್ಟು ಹೊರ ನಡೆದುಬಿಟ್ಟಳು. ಏಕಾಂತವಾಗಿ ದಟ್ಟಕಾಡಿನ ಮಧ್ಯ ನಡೆಯುತ್ತ ಗುಡ್ಡವನ್ನೇರಿದಳು. ಗುಡ್ಡದಿಂದ ಬಿದ್ದು ಪ್ರಾಣ ಸಮರ್ಪಿಸಲು ಮುಂದಾದಾಗ, ಕರುಣಾಳು ಪಾಂಡುರಂಗ ಪ್ರಕಟವಾಗಿ ಅಂತಃಕರಣದ ರಕ್ಷಣೆ ನೀಡಿದ, ‘ಮ್ಹಣೋನಿಯಾ ಮೀಚ ಅವತರಿಲೋ ಸಮಜಾ ಚಿದಂಬರ ನಾಮ ಧರೋನಿಯಾ’- ‘ನಾನೇ ಚಿದಂಬರ ನಾಮದಿಂದ ಅವತರಿಸಿ ಈಗ ಸದ್ಯ ಕುಂದಗೋಳದಲ್ಲಿ ವಾಸವಾಗಿದ್ದೇನೆ, ಇದೇ ಮಾರ್ಗದಲ್ಲಿ ನನ್ನ ಪರಮ ಶಿಷ್ಯ ನಾಮದೇವ, ತುಕಾರಾಮನ ಅವತಾರವಾದ ರಾಜಾರಾಮನು ದಿಂಡಿ ಸಹಿತ ಬರುವನು. ಅವನೊಂದಿಗೆ ಕುಂದಗೋಳಕ್ಕೆ ತೆರಳು. ಪೂರ್ಣಬ್ರಹ್ಮನ ದರ್ಶನವಾಗುವುದು’ ಎಂದು ತಿಳಿಸಿ ಅದೃಶ್ಯನಾದ. ಆಗ ವಿಠಾಬಾಯಿಯ ವಯಸ್ಸು ಕೇವಲ 14. ಸಂತ ರಾಜಾರಾಮರು ನಡೆದ ವೃತ್ತಾಂತ ತಿಳಿದು ಆನಂದಿತರಾದರು.

ಪಾದಯಾತ್ರೆ ಮಾರ್ಗದುದ್ದಕ್ಕೂ ರಾಜಾರಾಮರಿಂದ ಚಿದಂಬರ ನಾಮಮಹಾತ್ಮೆ, ಚಿದಂಬರನ ಅನೇಕ ಲೀಲೆಗಳನ್ನು ತಿಳಿದು ರೋಮಾಂಚಿತಳಾಗಿ ಯಾವಾಗ ಆ ಭಗವಂತನ ದಿವ್ಯದರ್ಶನ ಪಡೆದುಕೊಂಡೇನೋ ಎಂಬ ಕಾತುರದಿಂದ ದಾರಿ ಸವೆಸಹತ್ತಿದಳು. ವಿಠಾಬಾಯಿ ಕಾರ್ತಿಕಮಾಸದ ಶುದ್ಧ ಏಕಾದಶಿಯಂದು ಪಾಂಡುರಂಗ ಮತ್ತು ಚಿದಂಬರ ಮಹಾಸ್ವಾಮಿಯ ಮೊದಲ ದರ್ಶನಭಾಗ್ಯ ಪಡೆದುಕೊಂಡಳು. ಜೀವನದುದ್ದಕ್ಕೂ ಮಹಾಸ್ವಾಮಿಯ ನಾಮಪ್ರಸಾರ, ಚಿದಂಬರ ನಾಮ, ಚಿದಂಬರ ಸಂಪ್ರದಾಯದ ಪ್ರಸಾರದಲ್ಲಿ ತೊಡಗಿಕೊಂಡಳು. 40 ಸಾವಿರ ಅಭಂಗಗಳು ಮತ್ತು 2 ಸಾವಿರ ಹಾಡುಗಳನ್ನು ರಚಿಸಿದಳು. ಅನೇಕ ವರ್ಷಗಳ ನಂತರ ಶಕೆ 1790ರಲ್ಲಿ ವಿಠಾಬಾಯಿ ಗೋಕರ್ಣದಲ್ಲಿ ಸಮುದ್ರದ ಮೇಲೆ ನಡೆಯುತ್ತ ಹೋಗಿ ಮಧ್ಯಬಾಗದಲ್ಲಿ ಗುಪ್ತಳಾದಳು.

(ಲೇಖಕರು ಹವ್ಯಾಸಿ ಬರಹಗಾರರು)