ಹೊಳೆನರಸೀಪುರ: ಕನ್ನಡ ನಾಡಿನ ಜನರು ಕನ್ನಡ ಭಾಷೆಯನ್ನು ವಿದೇಶಗಳಲ್ಲೂ ಶ್ರೀಮಂತಗೊಳಿಸುತ್ತಿದ್ದಾರೆ. ಅಮೇರಿಕ ಸೇರಿದಂತೆ ವಿವಿಧ ದೇಶಗಳಲ್ಲಿರುವ ಕನ್ನಡಿಗರು ಅಲ್ಲಿಯೇ ಕನ್ನಡ ಸಂಘ ಕಟ್ಟಿಕೊಂಡು ಕನ್ನಡ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ನಡೆಸುತ್ತಾ ಕನ್ನಡ ನಾಡಿನ ಕಂಪನ್ನು ವಿದೇಶಗಳಲ್ಲೂ ಹರಡುತ್ತಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಬಿ. ಪುಟ್ಟೇಗೌಡ ವಿವರಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸಾಹಿತಿಗಳ ಬಗ್ಗೆ ಆಶುಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಹಿತ್ಯ ಪರಿಷತ್ ಶಾಲಾ, ಕಾಲೇಜುಗಳಲ್ಲಿ, ಸಾರ್ವಜನಿಕರಿಗಾಗಿ ಮೇಲಿಂದ ಮೇಲೆ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ಸೇವೆ ಮಾಡುತ್ತಿದೆ ಎಂದರು.
ಸಾಹಿತಿ ನಾಗೇಶ್ ಕೌಂಡಿನ್ಯ ಮಾತನಾಡಿ, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ವಿದ್ಯಾರ್ಥಿಗಳು ಯಾವ ಸಾಹಿತಿ, ಯಾವ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಆ ಪುಸ್ತಕದಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು. ಕುವೆಂಪು ಅವರ ರಾಮಾಯಣ ದರ್ಶನಂ, ದಾ.ರಾ.ಬೇಂದ್ರೆ ಅವರ ನಾಲ್ಕು ತಂತಿ, ಶಿವರಾಂ ಕಾರಾಂತರ ಮೂಕಜ್ಜಿಯ ಕನಸುಗಳು ಸೇರಿದಂತೆ ಜ್ಞಾನ ಪೀಠ ಪ್ರಶಸ್ತಿ ಪಡೆದ ಪುಸ್ತಕಗಳನ್ನು ತಪ್ಪದೆ ಓದಿ ಎಂದು ಸಲಹೆ ನೀಡಿದರು.
ಆಹಾರ ಸುರಕ್ಷತಾಧಿಕಾರಿ ವಿನಯ್ ಮಾತನಾಡಿ, ನಾವೆಲ್ಲ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು. ಪರಿಸರದ ಆರೋಗ್ಯ ಕಾಪಾಡಲು ಪ್ಲಾಸ್ಟಿಕ್ ಬಳಕೆ ಬಿಡಬೇಕು ಎಂದರು. ನಿವೃತ್ತ ಪ್ರಾಂಶುಪಾಲ ಎಚ್.ಎಸ್.ಪುಟ್ಟಸೋಮಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಶುಭಾಷಣ ಸ್ಪರ್ಧೆ ವಿಜೇತರಾದ ವಾಗೀಶ್ ಪ್ರಸಾದ್ ಪ್ರಥಮ, ಡಿ.ವಿ. ಪ್ರಥಮ ದ್ವಿತೀಯ, ಚೈತ್ರಾ ತೃತೀಯಾ, ಎಚ್.ಎಂ.ಕಿರಣ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಪ್ರಾಂಶುಪಾಲ ಎಂ.ಎಲ್. ಚಂದ್ರಕಾಂತ್ ಉಪಸ್ಥಿತರಿದ್ದರು.