ನ್ಯೂಸ್

ನಾಡಿನ ಏಕೀಕರಣಕ್ಕೆ ಮಹನೀಯರ ಹೋರಾಟ

ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಆ ಮಹಾನ್ ಚೇತನಗಳನ್ನು ಎಲ್ಲರೂ ನೆನೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಕನ್ನಡ ರಾಜ್ಯೋತ್ಸವದ ಹಿಂದೆ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಆ ಮಹಾನ್ ಚೇತನಗಳನ್ನು ಎಲ್ಲರೂ ನೆನೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಓವೆಲ್ ಮೆದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರ್ನಾಟಕದ ಏಕೀಕರಣ ಒಂದು ಭವ್ಯ ಇತಿಹಾಸ. 1956ನೇ ಇಸವಿಗೂ ವಿಭಿನ್ನ ಆಳ್ವಿಕೆಗೆ ಒಳಪಟ್ಟಿದ್ದ ಕರ್ನಾಟಕದ ಭೂ ಪ್ರದೇಶಗಳು ಒಂದುಗೂಡಿ ವಿಶಾಲ ಕರ್ನಾಟಕವಾದದ್ದು ರೋಮಾಂಚನ ಮೂಡಿಸುತ್ತದೆ. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ರಾಜಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ ಹಾಗೂ ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು. ಮೈಸೂರು ರಾಜ್ಯವನ್ನು 1973 ನ.1ರಂದು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಇದಕ್ಕೆ ಕಾರಣೀಭೂತರಾದ ಎಲ್ಲರನ್ನು ನಮ್ಮ ಸರ್ಕಾರ ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತದೆ ಎಂದರು.

ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ

ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆ ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ. ಕನ್ನಡ ಭಾಷೆ ಮಾತನಾಡುವವರು ಕಾವೇರಿಯಿಂದ ಗೋದಾವರಿಯವರೆಗೆ ಇರುವುದನ್ನು ಕಾಣುತ್ತೇವೆ ಎಂದರು.

ಕ್ರಿ.ಶ.450ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ. 850ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರದ ಬಗ್ಗೆ ಉಲ್ಲೇಖವಿದೆ. 21ನೇ ಶತಮಾನದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನೀಕತೆಯೊಂದಿಗೆ ತನ್ನದೇ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸಿದೆ, ಸೌಂದರ್ಯವಿದೆ, ಬೆಡಗಿದೆ. ಆದ್ದರಿಂದ ಪ್ರಾದೇಶಿಕ ಸಂಸ್ಕೃತಿ ಎತ್ತಿಹಿಡಿಯುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದರು.

ಏಕೀಕರಣ ಚಳವಳಿಯ ಪ್ರಮುಖರು

ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖರು. ಜತೆಗೆ ಗುದ್ಲೆಪ್ಪ ಹಳ್ಳಿಕೇರಿ, ಸಿದ್ದಪ್ಪ ಕಾಂಬ್ಳಿ, ಆರ್.ಎಚ್.ದೇಶಪಾಂಡೆ, ರಂಗರಾವ್ ದಿವಾಕರ್, ಕೌಜಲಗಿ ಶ್ರೀನಿವಾಸರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಎಚ್.ಮರಿಯಪ್ಪ ಸುಬ್ರಮಣಸ್ವಾಮಿ ಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಚೆನ್ನಯ್ಯ, ಟಿ.ವೀರನಗೌಡ, ಎಚ್.ಸಿ.ದಾಸಪ್ಪ, ಎಚ್.ಸಿದ್ದಯ್ಯ, ಕೆ.ಆರ್.ಕಾರಂತ್ ಮತ್ತು ಅನಕೃ ಮೊದಲಾದವರು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿ, ಕನ್ನಡ ಭಾಷಿಗರ ರಾಜ್ಯವಾಗಿ ಕರ್ನಾಟಕ ರೂಪಗೊಳ್ಳಲು ಶ್ರಮಿಸಿದರು. ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತಿದವರು ಸಾಹಿತಿಗಳು ಹಾಗೂ ರಾಜಕಾರಣಿಗಳು. ರಾಷ್ಟಕವಿ ಕುವೆಂಪು ಅವರು ಸಹ ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಕುವೆಂಪು ಅವರ ಜೈ ಭಾರತ ಜನನಿನಿಯ ತನುಜಾತೆ ಗೀತೆಯು ನಮ್ಮ ರಾಜ್ಯದ ನಾಡಗೀತೆಯಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೂ ಪ್ರತಿಪಾದಿಸಿದ್ದರು ಎಂಬುದನ್ನು ನಾವು ಮನಗಾಣಬೇಕಿದೆ. ನಮ್ಮ ನಾಡು-ನುಡಿ ಹಾಗೂ ಸಂಸ್ಕೃತಿಗೆ ಸುಮಾರು 2000 ವರ್ಷಗಳ ಭವ್ಯ ಇತಿಹಾಸ ಇದೆ. ದೇಶದ ಸಾಹಿತ್ಯ ಮತ್ತು ಭಾಷಾ ಲೋಕದಲ್ಲಿ ಕನ್ನಡ ಹಾಗೂ ಕರ್ನಾಟಕ ಅತ್ಯುನ್ನತವಾಗಿ ಬಣ್ಣಿಸಲ್ಪಟ್ಟಿದೆ. ಕನ್ನಡ ಭಾಷೆಯು ಹಲವು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವುದು ನಮ್ಮ ಸಾಹಿತ್ಯ, ಭಾಷಾ ಶ್ರೀಮಂತಿಕೆ ತೋರಿಸುತ್ತಿದೆ ಎಂದರು.

ಭಾಷೆಯಲ್ಲೇ ನಮ್ಮ ಸಂಸ್ಕೃತಿ ಇದೆ

ಕನ್ನಡವು ಯಾವುದೋ ಮತ ಪಂಥದ ಭಾಷೆಯಲ್ಲ. ಅದು ಈ ನಾಡಿನ, ಈ ಮಣ್ಣಿನ ಭಾಷೆ. ಈ ಭಾಷೆಯಲ್ಲೇ ನಮ್ಮ ಸಂಸ್ಕೃತಿ ಇದೆ. ನಮ್ಮ ಸಂಸ್ಕಾರ ಇದೆ. ನಮ್ಮ ಸಂಬಂಧಗಳು ಇವೆ. ನಮ್ಮ ನಾಗರಿಕತೆ ಇದೆ. ಈ ಭಾಷೆಯ ಶ್ರೀಮಂತಿಕೆಗೆ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಮುಂದಿನ ತಲೆಮಾರಿಗೆ ಈ ಭಾಷೆಯನ್ನು ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲೆ ಇದೆ. ಕೇವಲ ಭೌಗೋಳಿಕ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಕನ್ನಡದ ಮನಸ್ಸುಗಳ ಏಕೀಕರಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ. ವಿಜ್ಞಾನ-ತಂತ್ರಜ್ಞಾನದ ಜತೆ ಜತೆಗೂ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ. ಕನ್ನಡದ ಅಸ್ಮಿತೆಯನ್ನು ಕಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಕನ್ನಡ ನಮ್ಮ ಬದುಕಿನ ಭಾಷೆ, ನಮ್ಮ ಹೃದಯದ ಭಾಷೆ ಎಂಬುದನ್ನು ಯಾರೂ ಮರೆಯಬಾರದು ಎಂದರು.