ಬೆಳಗಾವಿ: ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿ ನೀಡುವಲ್ಲಿ ಬೆಳಗಾವಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಾಡು, ನುಡಿಗಾಗಿ ಅವಿರತ ಕೆಲಸ ಮಾಡಿದ ಅರ್ಹ ಹಿರಿಯರನ್ನು ಕಡೆಗಣಿಸಲಾಗಿದೆ ಎಂದು ಕನ್ನಡ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಡಿ ಭಾಗದಲ್ಲಿ ಕನ್ನಡ ಕಟ್ಟುವಲ್ಲಿ, ಭಾಷೆ ಕುರಿತು ಅಸ್ಮಿತೆ ಮೂಡಿಸುವಲ್ಲಿ ಹೋರಾಟ, ಸಾಹಿತ್ಯ ಸೇರಿ ನಾನಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದವರನ್ನು ಸರ್ಕಾರ ಮರೆತಿದೆ.
ಕನ್ನಡಪರ ಸಂಘಟನೆಗಳಿಂದ ಕನ್ನಡಕ್ಕಾಗಿ ಶ್ರಮಿಸಿದ ಪ್ರೊ.ಬಿ.ಎಸ್.ಗವಿಮಠ, ಡಾ.ಬಸವರಾಜ ಜಗಜಂಪಿ ಹಾಗೂ ಎಲ್.ಎಸ್.ಶಾಸ್ತ್ರಿ ಸೇರಿ ವಿವಿಧ ಕ್ಷೇತ್ರಗಳಲ್ಲಿನ ಹಿರಿಯ ಸಾಧಕರ ಹೆಸರು ಪ್ರಸ್ತಾಪಿಸಿದ್ದರೂ, ರಾಜಕಾರಣಿಗಳ ಲಾಬಿಗೆ ಮಣೆ ಹಾಕಿ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸದ, ನಾಡಗೀತೆ ಹಾಡಲೂ ಬಾರದವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಆಗಿರುವ ಅನ್ಯಾಯ ಸರಿಪಡಿಸುವಂತೆ ಕನ್ನಡಪರ ಸಂಘಟನೆಗಳ ವತಿಯಿಂದ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದು ಕನ್ನಡಪರ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ ತಿಳಿಸಿದ್ದಾರೆ.