ಶ್ರೀನಿವಾಸಪುರ: ತಾಲೂಕಿನ ವಿವಿಧೆಡೆ ಸೇರಿ ವಿವಿಧ ಕಡೆ ನಾಟಿ ಕೋಳಿಗಳಲ್ಲಿ ಗುಳ್ಳೆರೋಗ ಕಾಣಿಸಿಕೊಂಡಿದೆ. ಕರೊನಾ ಹಾವಳಿಯಿಂದ ಬದುಕು ಕಟ್ಟಿಕೊಳ್ಳಲು ಕೋಳಿ ಸಾಕಾಣೆಯಲ್ಲಿ ತೊಡಗಿದ್ದವರು ಇದೀಗ ಕೋಳಿಗಳ ಸಾವಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೋಳಿಗಳ ಮೈ ಮೇಲೆ ಗೋಲಿ ಗಾತ್ರದ ಗುಳ್ಳೆಗಳು ಕಾಣಿಸಿಕೊಂಡು ಪ್ರತಿ ಮನೆಯಲ್ಲಿ ದಿನಕ್ಕೆ ಹತ್ತು ಕೋಳಿಗಳು ಸಾಯುತ್ತಿವೆ ಎಂದು ಸಾಕಣೆದಾರರು ಅಳಲು ತೋಡಿಕೊಂಡಿತ್ತಾರೆ.
ಗುಳ್ಳೆರೋಗ ಯಾವ ಕಾರಣದಿಂದ ಹಬ್ಬಿದೆ ಎಂಬುದು ತಿಳಿಯುತ್ತಿಲ್ಲ, ಪಶು ವೈದ್ಯರನ್ನು ಭೇಟಿಯಾದಾಗ ಚಿಕನ್ ಫಾಕ್ಸ್ ಇರಬಹುದು, 1 ಲೀಟರ್ ನೀರಿನಲ್ಲಿ ಯಾಂಟಿ ಪೌಡರ್ ಮಿಶ್ರಣ ಮಾಡಿ ದಿನಕ್ಕೆ ಎರಡು ಸಲ ಕುಡಿಸಿ ಎಂದು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆ ಪಾಲಿಸಿದರೂ ಕೋಳಿಗಳು ಬದುಕುಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪಶು ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಕೋಳಿ ಸಾಕಾಣೆದಾರರ ಸಮಸ್ಯೆ ವಿಚಾರಿಸಿ ಕೋಳಿಗಳ ರಕ್ಷಣೆಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
ನಾಟಿ ಕೋಳಿಗಳಿಗೆ ಗುಳ್ಳೆರೋಗ ಕಾಣಿಸಿಕೊಂಡಿರುವುದರಿಂದ ಸಾಕಷ್ಟು ನಷ್ಟ ಅನುಭವಿಸುವ ಆತಂಕ ಎದುರಾಗಿದೆ, ಪಶು ಇಲಾಖೆ ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಿ ಕೋಳಿಗಳನ್ನು ರಕ್ಷಣೆ ಮಾಡದಿದ್ದರೆ ಕೋಳಿ ಸಾಕಾಣೆದಾರರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಎಸ್.ವೆಂಕಟರಾಮರೆಡ್ಡಿ, ಕೋಳಿಫಾರ್ಮ್ ಮಾಲೀಕ, ಎಚ್.ನಲ್ಲಪಲ್ಲಿ, ಶ್ರೀನಿವಾಸಪುರ ಕೋಳಿಗಳು ಗುಳ್ಳೆರೋಗದಿಂದ ಜೀವ ಬಿಡುತ್ತಿರುವುದರಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ, ನಾಟಿ ಕೋಳಿ ಪ್ರಿಯರು ಕೋಳಿ ಮಾಂಸ ಸೇವಿಸಲು ಹೆದರುತ್ತಿದ್ದಾರೆ, ಪಶು ವೈದ್ಯರು ರೈತರ ರಕ್ಷಣೆಗೆ ಮುಂದಾಗಬೇಕು. ಲಕ್ಷ್ಮೀದೇವಮ್ಮ ರಾಮಕೃಷ್ಣೇಗೌಡ, ಕೋಳಿ ಸಾಕಾಣೆದಾರರು, ಎಚ್.ನಲ್ಲಪಲ್ಲಿ, ಶ್ರೀನಿವಾಸಪುರ ನಾಟಿ ಕೋಳಿಗಳಲ್ಲಿ ಗುಳ್ಳೆರೋಗ ಕಂಡು ಬಂದಿರುವುದು ಗಮನಕ್ಕೆ ಬಂದಿಲ್ಲ, ಶ್ರೀನಿವಾಸಪುರ ತಾಲೂಕು ಪಶು ವೈದ್ಯಾಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ರೈತರಿಗೆ ನಷ್ಟವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಗುಳ್ಳೆ ರೋಗದ ಬಗ್ಗೆ ಆತಂಕಪಡಬೇಕಿಲ್ಲ, ಕೋಳಿ ರಕ್ಷಣೆ ಮಾಡಲು ಇಲಾಖೆಯಲ್ಲಿ ಒಳ್ಳೆಯ ಔಷಧಗಳಿವೆ. ಡಾ.ಜಗದೀಶ್, ಉಪ ನಿರ್ದೇಶಕ, ಪಶುಪಾಲನಾ ಇಲಾಖೆ, ಕೋಲಾರ