ಬೆಂಗಳೂರು: ಸರ್ಕಾರಗಳು ಬದಲಾದ ಸಂದರ್ಭದಲ್ಲಿ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ನೇಮಕಾತಿ ಬದಲಾಗುವುದು ಹೊಸದೇನಲ್ಲ. ಆದರೆ, ಕರ್ನಾಟಕ ನಾಟಕ ಅಕಾಡೆಮಿ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಪ್ರಕಟಗೊಂಡಿದ್ದ ಪ್ರಶಸ್ತಿ ಪಟ್ಟಿಯನ್ನೇ ರದ್ದುಗೊಳಿಸಿ ಹೊಸ ಪುರಸ್ಕೃತರ ಪಟ್ಟಿ ಪ್ರಕಟಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಜೆ. ಲೋಕೇಶ್ ನೇತೃತ್ವದ ತಂಡ ಆಯ್ಕೆ ಮಾಡಿದ್ದ 2019-20ನೇ ಸಾಲಿಗೆ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಹಾಲಿ ಅಧ್ಯಕ್ಷ ಭೀಮಸೇನ ನೇತೃತ್ವದ ತಂಡ ರದ್ದುಪಡಿಸಿದ್ದು, ಶನಿವಾರ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ.
ನಾಟಕ ಅಕಾಡೆಮಿಯ ಈ ಧೋರಣೆಗೆ ಕಲಾವಿದರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೊಸ ಪಟ್ಟಿಯ ಪ್ರಕಾರ ಬೆಂಗಳೂರಿನ ಜಿ.ವಿ. ಶಾರದಾ ‘ಜೀವಮಾನ ಗೌರವ ಪ್ರಶಸ್ತಿ’ಗೆ ಹಾಗೂ 25 ಕಲಾವಿದರನ್ನು ‘ವಾರ್ಷಿಕ ರಂಗ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಹಳೆಯ ಪಟ್ಟಿಯಲ್ಲಿ ಆಯ್ಕೆಯಾಗಿ ಸಂಭ್ರಮಿಸಿದ್ದವರಿಗೆ ನಿರಾಸೆಯಾಗಿದೆ.
ಜೀವಮಾನದ ಗೌರವ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಸ್ಮರಣಿಕೆಯನ್ನು, ವಾರ್ಷಿಕ ರಂಗ ಪ್ರಶಸ್ತಿಗಳು ತಲಾ 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ. ದತ್ತಿ ಪ್ರಶಸ್ತಿಗಳು ತಲಾ 5 ಸಾವಿರ ರೂ. ನಗದು, ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ: ಬಿ.ವಿ.ಶಾರದಾ (ಜೀವಮಾನದ ಗೌರವ ಪ್ರಶಸ್ತಿ) ಪರಮೇಶ್ವರ್ ಲೆಂಡೆ (ಕಲಬುರ್ಗಿ), ಜಕೀರ್ ನದಾಫ್ (ಬೆಳಗಾವಿ), ನಾಗೇಂದ್ರ ಶಾ (ಬೆಂಗಳೂರು), ಕೆ.ಪಿ. ಪ್ರಕಾಶ್ (ಬೆಂಗಳೂರು ಗ್ರಾಮಾಂತರ), ಡಾ. ಎಂ. ಬೈರೇಗೌಡ (ರಾಮನಗರ), ಶಾಂತಮ್ಮ ಬಿ. ಮಲಕಲ್, (ಬಾಗಲಕೋಟೆ), ಮಂಜುಳಾ ಮಂಜುನಾಥ್ (ತುಮಕೂರು), ಮಾಲೂರು ಸಿದ್ದಪ್ಪ (ಕೋಲಾರ), ಗಣಪತಿ ಬಿ. ಹೆಗಡೆ ಹಿತ್ಲಕೈ (ಉತ್ತರ ಕನ್ನಡ), ಜಂಬುನಾಥ್ (ಚಿತ್ರದುರ್ಗ), ಸಿದ್ದಲಿಂಗಪ್ಪ (ತುಮಕೂರು), ಬಿ.ಎಲ್. ರವಿಕುಮಾರ್ (ಚಿಕ್ಕಮಗಳೂರು), ನಾಗರಾಜಗೌಡ (ಶಿವಮೊಗ್ಗ), ಶಾಡ್ರಾಕ (ಹಾಸನ), ವಿಜಯಕುಮಾರ್ ಕೋಡಿಯಾಲ್ ಬೈಲ್ (ಮಂಗಳೂರು), ಭಾಸ್ಕರ ಮಣಿಪಾಲ (ಉಡುಪಿ), ಸಂಗಮೇಶ ಬಾದಾಮಿ (ವಿಜಯಪುರ), ಶಶಿಪ್ರಭಾ ಆರಾಧ್ಯ (ಹುಬ್ಬಳ್ಳಿ), ಮಧುಕುಮಾರ ಹರಿಜನ (ಹಾವೇರಿ), ಗುರುನಾಥ್ ಕೋಟೆ ಜೀರ್ಗಾ (ಬೀದರ್), ರಮೇಶ ಹಂಚಿನಮನಿ (ಬಳ್ಳಾರಿ), ಚನ್ನಬಸವನಗೌಡ ಪಾಟೀಲ ಕುಲಕರ್ಣಿ (ಧಾರವಾಡ), ಬಿ.ಎನ್. ಶಶಿಕಲಾ (ಮೈಸೂರು), ಡಾ. ಎಂ.ಎಸ್. ವೇಣುಗೋಪಾಲ (ಮೈಸೂರು) ಹಾಗೂ ಬಸವರಾಜ ಹೆಸರೂರು (ಕೊಪ್ಪಳ) ಅವರನ್ನು ವಾರ್ಷಿಕ ರಂಗಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಉಮಾಶ್ರೀ ಪ್ರಶಸ್ತಿಗೆ ಕೊಕ್
ಮೈತ್ರಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಜೆ. ಲೋಕೇಶ್ ಹಾಗೂ ಸದಸ್ಯರ ತಂಡ ‘ಜೀವಮಾನದ ಗೌರವ ಪ್ರಶಸ್ತಿ’ಗೆ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ರಂಗಕಲಾವಿದೆ ಉಮಾಶ್ರೀ ಅವರನ್ನು ಆಯ್ಕೆ ಮಾಡಿತ್ತು. ಆದರೆ, ಉಮಾಶ್ರೀ ಕಾಂಗ್ರೆಸ್ ಪಕ್ಷದವರು ಎಂಬ ಕಾರಣಕ್ಕೆ ಹಾಲಿ ಸಮಿತಿ ಪ್ರಶಸ್ತಿ ನಿರಾಕರಿಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಅಕಾಡೆಮಿ ಅಧ್ಯಕ್ಷರು ಬದಲಾದ ಕಾರಣಕ್ಕೆ ವಾರ್ಷಿಕ ರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದ 25 ಕಲಾವಿದರು ಗೌರವದಿಂದ ವಂಚಿತರಾಗಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ದತ್ತಿ ಪ್ರಶಸ್ತಿಗಳು
ಅಕಾಡೆಮಿಯ ಇತಿಹಾಸದಲ್ಲಿ ಇದೊಂದು ಕಪು್ಪ ಚುಕ್ಕೆ. ಕಲೆಯನ್ನು ಸಮಾಧಿ ಮಾಡಿ ಅದರ ಗೋರಿಯ ಮೇಲೆ ತುಳಸಿ ಗಿಡ ನೆಟ್ಟು ಪೂಜೆ ಮಾಡಿದಂತಾಗಿದೆ. ಈ ಹಿಂದಿನ ಪಟ್ಟಿಯಲ್ಲಿದ್ದ ಕಲಾವಿದರ ಕ್ಷಮೆ ಕೋರುತ್ತೇನೆ. |ಜೆ.ಲೋಕೇಶ್ ಮಾಜಿ ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ