ಗಂಗಾಧರ್ ಬೈರಾಪಟ್ಟಣ ರಾಮನಗರ
ನಗರಸಭೆ ವಿರುದ್ಧ ಜನಾಕ್ರೋಶ ತೀವ್ರಗೊಂಡಿದ್ದು, ಹೋರಾಟಕ್ಕೆ ಮುನ್ನುಡಿ ಇಟ್ಟಿದ್ದಾರೆ. ಕಳೆದ ಮೂರ‌್ನಾಲ್ಕು ವರ್ಷಗಳಿಂದಲೂ ನಗರಸಭೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದ್ದರೂ ನಗರಸಭೆ ಸಾರ್ವಜನಿಕರ ಪಾಲಿಗೆ ನರಕಸಭೆಯಾಗಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ.
ಖಾತೆಗೆ ಕ್ಯಾತೆ: ಸಾರ್ವಜನಿಕರು ಹೊಸ ನಿವೇಶನ ಖರೀದಿ, ಹಳೇ ನಿವೇಶನಗಳಿಗೆ ಇ-ಖಾತೆ ಪಡೆಯುವುದು, ನಮೂನೆ -3ರ ದಾಖಲೆಗಳನ್ನು ಪಡೆದುಕೊಳ್ಳಲು ನಗರಸಭೆ ಸಿಬ್ಬಂದಿಯೇ ಇಲ್ಲಸಲ್ಲದ ನಿಬಂಧನೆಗಳನ್ನು ಹಾಕಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ದೂರುಗಳು ಹೆಚ್ಚಿವೆ. ಕಾಸು ಕೊಟ್ಟರಷ್ಟೇ ಖಾತೆ, ಇಲ್ಲವಾದರೆ ನಗರಸಭೆಗೆ ಅಲೆದು ಚಪ್ಪಲಿ ಸವೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇನ್ನು ನಮೂನೆ 3 ಪಡೆಯಬೇಕಾದರೆ ನಗರಸಭೆ ಸಿಬ್ಬಂದಿಗೆ ಇಂತಿಷ್ಟು ಹಣ ಕೊಡಲೇಬೇಕು ಎನ್ನುವ ದೂರುಗಳಿವೆ. ಮನೆಯ ಕಷ್ಟಕ್ಕೋ, ಮಕ್ಕಳ ಓದು ಅಥವಾ ಮದುವೆಗೋ ಎಂದು ನಿವೇಶನ ಮಾರಾಟ ಮಾಡಲು ಹೋದರೆ ಇಲ್ಲಸಲ್ಲದ ಕಾನೂನುಗಳನ್ನು ಇಟ್ಟು ಮಾನಸಿಕ ಕಿರುಕುಳ ನೀಡುತ್ತಾರೆ ಎನ್ನುವ ಆರೋಪವೂ ಇದೆ.
ಮೂಲಸೌಕರ್ಯಕ್ಕೂ ಕೊಕ್ಕೆ: ನಗರಸಭೆ ವ್ಯಾಪ್ತಿಯಲ್ಲಿ ಕೇವಲ ಖಾತೆಗಳ ವಿಚಾರಕ್ಕೆ ಮಾತ್ರ ಕ್ಯಾತೆ ಅಲ್ಲದೆ, ಸಾರ್ವಜನಿಕರಿಗೆ ಪ್ರತಿದಿನ ದೊರೆಯಬೇಕಾದ ಮೂಲಸೌಕರ್ಯಗಳ ಒದಗಿಸುವಲ್ಲೂ ಹಿಂದೆ ಬಿದ್ದಿದೆ. ಕುಡಿಯುವ ನೀರು, ಕಸ ವಿಲೇವಾರಿ ಸೇರಿ ಎಲ್ಲವೂ ವಾರದಲ್ಲಿ ಒಮ್ಮೆ, ಇಲ್ಲವೇ ಎರಡು ಬಾರಿ ಎನ್ನುವಂತೆ ಆಗಿದೆ. ಇನ್ನು ನಗರದ ಪ್ರಮುಖ ರಸ್ತೆಗಳಲ್ಲಿಯೇ ಮ್ಯಾನ್‌ಹೋಲ್‌ಗಳು ತುಂಬಿ ಹರಿದರೂ ವಾರಗಟ್ಟಲೆ ದುರಸ್ತಿ ಮಾಡುವ ಗೋಜಿಗೂ ನಗರಸಭೆ ಗಮನಹರಿಸುತ್ತಿಲ್ಲ.
ಕೇಳುವವರೇ ಇಲ್ಲ: ರಾಮನಗರ ನಗರಸಭೆ ಜನಪ್ರತಿನಿಧಿಗಳ ಆಡಳಿತ ಪೂರ್ಣಗೊಂಡು ವರ್ಷ ಕಳೆಯುತ್ತಾ ಬಂದಿದೆ. ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಯಾಗಿದ್ದರೂ ನಗರಸಭೆ ಆಡಳಿತದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಿಂದಿನ ಸದಸ್ಯರು ವಾರ್ಡ್ ವ್ಯಾಪ್ತಿಯ ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಹೋದರೂ ಇವರ ಮಾತಿಗೆ ಕಿಮ್ಮತ್ತು ಸಿಗುತ್ತಿಲ್ಲ. ಇವುಗಳ ಬಗ್ಗೆ ಗಮನಹರಿಸಬೇಕಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಇತ್ತ ತಿರುಗಿ ನೋಡಿಲ್ಲ ಎಂಬ ಆರೋಪ ಕೇಳಿಬಂದಿದೆೆ.
ಜತೆಗೆ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಪೌರಾಯುಕ್ತರಿಗೆ ನಗರಸಭೆ ಆಡಳಿತ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಇದರ ಪರಿಣಾಮ ನಗರಸಭೆಯಲ್ಲಿ ಬೀಡುಬಿಟ್ಟಿರುವ ಕೆಲ ಸಿಬ್ಬಂದಿ ಇಷ್ಟಬಂದಂತೆ ಕಾರ್ಯ ನಿರ್ವಹಿಸು ತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿವೆ.
ಹೋರಾಟಕ್ಕೆ ಮುನ್ನುಡಿ: ಇದರ ನಡುವೆ ರಾಮನಗರ ನಗರಸಭೆ ಆಡಳಿತಕ್ಕೆ ಬಿಸಿ ಮುಟ್ಟಿಸಲು ನಗರದ ಸಾರ್ವಜನಿಕರು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷರೂ ಆದ ಕೆ.ಶೇಷಾದ್ರಿ ನೇತೃತ್ವದಲ್ಲಿ ಸಮಾನ ಮನಸ್ಕರು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.14ರಂದು ರಾಮನಗರದಲ್ಲಿ ಸಭೆ ಕರೆಯಲಾಗಿದ್ದು, ನಗರಸಭೆ ದುರಾಡಳಿತದ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.
ಅಕ್ರಮ ಖಾತೆಗೆ ಫೇಮಸ್ :
ಅಕ್ರಮ ಖಾತೆ ಮಾಡಿಕೊಡುವಲ್ಲಿ ರಾಮನಗರ ನಗರಸಭೆ ಹೆಸರುವಾಸಿ ಎನ್ನುವಂತಾಗಿದೆ. 2013-14ನೇ ಸಾಲಿನಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ಖಾತೆಗಳಾಗಿರುವುದು ಬೆಳಕಿಗೆ ಬಂದಿತ್ತು. ವಿಸ್ತೃತ ತನಿಖೆ ನಡೆಸಿದ್ದ ಪೌರಾಡಳಿತ ನಿರ್ದೇಶನಾಲಯ ಹಲವಾರು ಖಾತೆಗಳನ್ನು ಅಕ್ರಮ ಎಂದು ಸಾಬೀತುಪಡಿಸಿ ಖಾತೆಗಳ ವಹಿಯನ್ನು ರದ್ದುಪಡಿಸುವಂತೆ ನಿರ್ದೇಶನ ನೀಡಿತ್ತು. ವಿಪರ್ಯಾಸವೆಂದರೆ ಯಾವ ಖಾತೆಗಳು ರದ್ದಾಗಬೇಕಿತ್ತೋ ಅದೇ ಖಾತೆಗಳಿಗೆ ಇತ್ತೀಚಿಗೆ ಗಣಕೀಕೃತ ತಂತ್ರಾಂಶದೊಂದಿಗೆ ನಮೂನೆ-3ರನ್ನು ನೀಡಿರುವುದು ನಗರಸಭೆ ಆಡಳಿತಕ್ಕೆ ಹಿಡಿದ ಕನ್ನಡಿಯಂತಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಪೌರಾಯುಕ್ತರಾಗಿದ್ದ ಬಿ.ಶುಭಾ ಮತ್ತು ಅವರ ಸಿಬ್ಬಂದಿ 7 ಸ್ವತ್ತುಗಳಿಗೆ ಗಣಕೀಕೃತ ತಂತ್ರಾಂಶದ ಮೂಲಕ ನಮೂನೆ -3ನ್ನು ನೀಡಿದ್ದಾರೆ ಎಂದು ಎನ್.ಶಿವನಾಗಸ್ವಾಮಿ ಎಂಬುವವರು ಜಿಲ್ಲಾಧಿಕಾರಿ ಸೇರಿ ವಿವಿಧ ಸರ್ಕಾರಿ ತನಿಖಾ ಸಂಸ್ಥೆಗಳಿಗೆ ದೂರು ನೀಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಸುಮಾರು 5-6 ತಿಂಗಳು ಯಾವುದೇ ಸಾರ್ವಜನಿಕ ಕೆಲಸಗಳು ನಡೆದಿಲ್ಲ. ಹೀಗಾಗಿ ನಗರಸಭೆಯಲ್ಲಿ ಕೆಲಸದ ಒತ್ತಡ ಹೆಚ್ಚಿದೆ. ಸಿಬ್ಬಂದಿ ಹೆಚ್ಚಿನ ಸಮಯ ಕೆಲಸ ಮಾಡಿ ಬಾಕಿ ಕೆಲಸಗಳನ್ನು ಮುಗಿಸುತ್ತಿದ್ದಾರೆ. ನಗರಸಭೆ ಆಡಳಿತವನ್ನು ಸರಿದಾರಿಗೆ ತರುವ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ.
ಬಿ.ನಂದಕುಮಾರ್ ಪೌರಾಯುಕ್ತ, ರಾಮನಗರ ನಗರಸಭೆ
ನಗರಸಭೆಯಲ್ಲಿ ಕಳೆದ 304 ವರ್ಷಗಳಿಂದ ಜನತೆಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಫೆ.14ರಂದು ಸಮಾನ ಮನಸ್ಕರ ಜತೆಗೂಡಿ ಸಭೆ ನಡೆಸಿ ನಗರಸಭೆ ದುರಾಡಳಿತದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು.
ಕೆ.ಶೇಷಾದ್ರಿ ಕಾಂಗ್ರೆಸ್ ಮುಖಂಡರು, ರಾಮನಗರ
-------------------------------------------------------------