ನಾಗರಿಕ ರಕ್ಷಣೆಯ ತುರ್ತು ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲು ಜಿಲ್ಲೆಯಲ್ಲಿ ಸಮರ್ಥ ಅಧಿಕಾರಿಗಳ ನೇತೃತ್ವದಲ್ಲಿ ಅಗತ್ಯವಿರುವ ಎಲ್ಲ ಇಲಾಖೆಗಳನ್ನು ಒಳಗೊಂಡಂತೆ 12 ಸೇವಾ ತಂಡಗಳನ್ನು ಜಿಲ್ಲಾಡಳಿತದಿಂದ ರಚನೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ ಪಿ.ಶಿವರಾಜು ತಿಳಿಸಿದರು.
ವಿಪತ್ತು ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆ ಬಗ್ಗೆ ಕೈಗೊಳ್ಳಬೇಕಾದ ಅಗತ್ಯ ಕಾರ್ಯಗಳ ಸಿದ್ಧತೆಗಳ ಕುರಿತಂತೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ತುರ್ತು ಸಂದರ್ಭ ಎದುರಾದಲ್ಲಿ ನಾಗರಿಕರ ರಕ್ಷಣೆ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ತಂಡ ರಚಿಸಲಾಗಿದೆ ಎಂದರು.
ಮೈಸೂರಿಗೆ ಪ್ರಾಥಮಿಕವಾಗಿ ಭದ್ರತೆ ದೃಷ್ಟಿಯಿಂದ ತೀವ್ರತರವಾದ ಆತಂಕವಿಲ್ಲ. ಆದರೆ ಮೈಸೂರು ಜಗತ್ಪ್ರಸಿದ್ಧ ಪ್ರವಾಸಿ ಕೇಂದ್ರ ಆಗಿರುವುದರಿಂದ ನಾವೆಲ್ಲರೂ ಜಾಗೃತರಾಗಿರುವುದು ಅವಶ್ಯಕ. ಈ ಸಂಬಂಧ ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ, ಬೆಂಕಿಯಿಂದ ರಕ್ಷಣೆ ಹಾಗೂ ಸೂಕ್ಷ್ಮ ಪ್ರದೇಶಗಳ ಭದ್ರತೆ ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ವೃಂದದ ಅಧಿಕಾರಿಗಳು ಸಮನ್ವಯದಿಂದ ಒಂದಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
12 ಸೇವಾ ತಂಡ:
ನಾಗರಿಕರ ರಕ್ಷಣೆ ಸಂಬಂಧ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಎಚ್ಚರಿಕೆ ಮತ್ತು ಮಾಹಿತಿ ಪ್ರಸರಣಕ್ಕಾಗಿ ಸಂವಹನ ಸೇವೆ, ಬೆಂಕಿ ಸಂಬಂಧಿತ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಅಗ್ನಿಶಾಮಕ ಸೇವೆ, ಸಾರಿಗೆ ಪೂರೈಕೆ ಸೇವೆ ಈ ರೀತಿ 12 ತಂಡಗಳನ್ನು ರಚನೆ ಮಾಡಲಾಗಿದೆ. ಈ 12 ತಂಡಗಳಲ್ಲಿ ಪೊಲೀಸ್ ಆಯುಕ್ತರು, ಆರಕ್ಷಕ ಅಧೀಕ್ಷಕರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಆಯುಕ್ತರು, ತಹಸೀಲ್ದಾರರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರು, ಅಗ್ನಿ ಶಾಮಕ ಪ್ರಾದೇಶಿಕ ಅಧಿಕಾರಿ, ಏರ್ಪೋರ್ಟ್ ಅಧಿಕಾರಿಗಳು, ರೈಲ್ವೇ ಅಧಿಕಾರಿಗಳು, ಆಕಾಶವಾಣಿ ಮುಂತಾದ ಜಿಲ್ಲೆಯ ಎಲ್ಲ ಇಲಾಖೆಗಳ ಎಲ್ಲ ಅಧಿಕಾರಿಗಳು ಒಳಗೊಂಡಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ವೃಂದದ ಹಾಗೂ ರಾಜ್ಯ ಸರ್ಕಾರದ ವೃಂದದ ಎಲ್ಲ ಇಲಾಖೆಗಳು ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ರಕ್ಷಣೆ ನೀಡಲು ಹಾಗೂ ಆತ್ಮಸ್ಥೈರ್ಯ ನೀಡಲು ಪ್ರತಿಯೊಬ್ಬರೂ ಮುಂದಾಗಬೇಕು. 24*7 ಕರ್ತವ್ಯ ನಿರ್ವಹಿಸಲು ಸನ್ನದ್ಧರಾಗಬೇಕು ಎಂದು ಕೋರಿದರು.
ಜಿಲ್ಲಾಡಳಿತದ ವತಿಯಿಂದ ಕಂಟ್ರೋಲ್ ರೂಂ ಅನ್ನು 24*7 ತೆರೆಯಲಾಗಿದ್ದು, ಅಲ್ಲಿಂದ ನಿರ್ದೇಶನಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಲಾಗುವುದು. ನಿರ್ದೇಶನಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.