ಬೀರೂರಿನ ಮನೆಯೊಂದರಲ್ಲಿ ಗೌರಿಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು. 
ನ್ಯೂಸ್

ನಾಗರ ಕಲ್ಲಿಗೆ ಹಾಲೆರೆದು ಪೂಜೆ

ಬೀರೂರು: ಪಟ್ಟಣದಾದ್ಯಂತ ಸ್ವರ್ಣಗೌರಿ ವ್ರತ ಹಾಗೂ ಗಣೇಶ ಚತುರ್ಥಿಯನ್ನು ಸೋಮವಾರ ಸಡಗರದಿಂದ ಆಚರಿಸಲಾಯಿತು. ಮಹಿಳೆಯರು ಮನೆಯಲ್ಲಿ ಮಂಟಪ ನಿರ್ಮಿಸಿ ಬಾಳೆ ಕಂದು, ಮಾವಿನ ತೋರಣ ಹಾಗೂ ವಿವಿಧ ಹೂವಿನ ಹಾರಗಳನ್ನು ಕಟ್ಟಿ ಅಲಂಕಾರ ಮಾಡಿ ಗೌರಿಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಸುಮಂಗಲಿಯವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಹೆಣ್ಣು ಮಕ್ಕಳು ತವರು ಮನೆಯಿಂದ ತಂದೆ-ತಾಯಿ ಅಥವಾ ಸಹೋದರರು ತಂದಿದ್ದ ಬಾಗಿನಕ್ಕೆ ಭಕ್ತಿಯಿಂದ ಪೂಜಿಸಿ ಸ್ವೀಕರಿಸಿದರು. ಮುತ್ತೈದೆಯರು ಅರಿಶಿಣ-ಕುಂಕುಮ ವಿನಿಮಯ ಮಾಡಿಕೊಂಡು ಶುಭ ಕೋರಿದರು. ಬೀರೂರಿನಲ್ಲಿ ಬಹಳಷ್ಟು ಕುಟುಂಬಗಳು ಗೌರಿ ಹಬ್ಬದಲ್ಲಿ ನಾಗರು ಮಾಡುವ ಪದ್ಧತಿಯೂ ಇದ್ದು ಸಮೀಪದಲ್ಲಿರುವ ಹುತ್ತಕ್ಕೆ ಹಾಗೂ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಮನೆಯಿಂದ ಚಿಗಣಿ, ಅಕ್ಕಿ ಟಂಟ, ಲಾಹಾರ ಹಾಗೂ ಹಾಲು-ತುಪ್ಪ ಎರೆದರು. ಗೌರಿ ದಾರವನ್ನು ಪರಸ್ಪರ ಕಟ್ಟಿಕೊಂಡರು. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ಲಾಹಾರ ಸೇವಿಸಿ ಮನೆಗೆ ಹಿಂದಿರುಗಿ ಮನೆಯಲ್ಲಿ ಮಾಡಿದ್ದ ವಿವಿಧ ಸಿಹಿ ಖಾದ್ಯಗಳ ಜತೆ ಭೋಜನ ಸ್ವೀಕರಿಸಿದರು.