ಹುಣಸೂರು ತಾಲೂಕು ಚಿಲ್ಕುಂದ ಗ್ರಾಮದ ಮಹಿಳಾ ಸ್ವಸಹಾಯ ಸಂಘದ ನರ್ಸರಿಯಲ್ಲಿ ಫಲಾನುಭವಿಗಳಿಗೆ ಇಒ ಬಿ.ಕೆ.ಮನು ಸಸಿಗಳನ್ನು ವಿತರಿಸಿದರು. ಎಚ್.ಡಿ.ಲೋಕೇಶ್, ಗೀತಾ, ಸೌಮ್ಯ ಮತ್ತು ಫಲಾನುಭವಿಗಳಿದ್ದರು. 
ನ್ಯೂಸ್

ನರ್ಸರಿ ಆರಂಭಿಸಿ ಆರ್ಥಿಕಾಭಿವೃದ್ಧಿಯತ್ತ ದಾಪುಗಾಲು

ಹುಣಸೂರು: ತಾಲೂಕಿನಲ್ಲಿ ಸ್ವಸಹಾಯ ಸಂಘದ ಮಹಿಳೆಯರು ನರ್ಸರಿ ಸ್ಥಾಪಿಸುವ ಮೂಲಕ ಆರ್ಥಿಕಾಭಿವೃದ್ಧಿಯತ್ತ ದಾಪುಗಾಲು ಇಟ್ಟಿರುವುದು ಉತ್ತಮ ಬೆಳವಣಿಗೆ ಎಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ಮನು ಹೇಳಿದರು.


ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (ಎನ್‌ಆರ್‌ಎಲ್‌ಎಂ)ಯಡಿ ಸ್ಥಾಪಿತವಾಗಿರುವ ಸಂಜೀವಿನಿ ಕಿರಂಗೂರು ಗ್ರಾ.ಪಂ. ಮಟ್ಟದ ಒಕ್ಕೂಟ ಮತ್ತು ಸಂಜೀವಿನಿ ಚಿಲ್ಕುಂದ ಗ್ರಾ.ಪಂ. ಮಟ್ಟದ ಒಕ್ಕೂಟದ ಸಹಯೋಗದಲ್ಲಿ ಸ್ಥಾಪಿಸಿದ್ದ ನರ್ಸರಿಯಲ್ಲಿ ಗುರುವಾರ ಸಂಘದ ಫಲಾನುಭವಿಗಳಿಗೆ ಸಸಿಗಳನ್ನು ವಿತರಿಸಿ ಮಾತನಾಡಿದರು.


ವರ್ಷದ ಹಿಂದೆ ಜಿಲ್ಲೆಯಲ್ಲೇ ಪ್ರಥಮವಾಗಿ ತಾಲೂಕಿನ ಸ್ವಸಹಾಯ ಸಂಘಗಳ ಮೂಲಕ ನರ್ಸರಿ ಸ್ಥಾಪಿಸಲಾಗಿತ್ತು. ಈಗ ಸಸಿಗಳನ್ನು ಫಲಾನುಭವಿಗಳಿಗೆ ವಿತರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ನರೇಗಾ ಯೋಜನೆಯಡಿ 2 ಲಕ್ಷ ರೂ. ಮತ್ತು ಫಲಾನುಭವಿಗಳಿಂದ 50 ಸಾವಿರ ರೂ.ವಂತಿಕೆಯೊಂದಿಗೆ ಆರಂಭಗೊಂಡ ಯೋಜನೆ ಇಂದು ಸಾಧನೆಯ ಹಾದಿಯಲ್ಲಿದೆ. ಮುಂದಿನ ದಿನಗಳಲ್ಲಿ ಇಲಾಖೆಗಳಿಗೆ ಮತ್ತು ರೈತರಿಗೆ ಅಗತ್ಯವಾದ ಸಸಿಗಳನ್ನು ಬೆಳೆದು ನೀಡುವ ಗುರಿಯನ್ನು ಸಂಘಗಳು ಹೊಂದಿವೆ. ಪ್ರತಿ ಒಕ್ಕೂಟದಿಂದ 15 ಜನರಿಗೆ ನರೇಗಾ ಯೋಜನೆಯಡಿ ಉದ್ಯೋಗ ದೊರಕಿದೆ. ತೋಟಗಾರಿಕೆ, ಅರಣ್ಯೀಕರಣ, ರೇಷ್ಮೆ ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಅಗತ್ಯ ಸಸಿಗಳನ್ನು ಬೆಳೆಸುವ ಗುರಿಯನ್ನು ಸದಸ್ಯರು ಹೊಂದಿದ್ದು, ಮಾದರಿಯಾಗಿ ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು


ಚಿಲ್ಕುಂದ ಒಕ್ಕೂಟದ ಅಧ್ಯಕ್ಷೆ ಗೀತಾ ಮಾತನಾಡಿ, ಆರಂಭಿಕ ಹಂತವಾಗಿ ಕಿರಂಗೂರು, ಉಮ್ಮತ್ತೂರು ಮತ್ತು ಚಿಲ್ಕುಂದ ಗ್ರಾ.ಪಂ. ಗಳಿಗೆ ಸಸಿಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ 41 ಗ್ರಾ.ಪಂ.ಗಳ 101 ಸ್ವಸಹಾಯ ಸಂಘದ ಮಹಿಳೆಯರಿಗೆ ಸಸಿಗಳನ್ನು ವಿತರಿಸಲಾಗುವುದು ಎಂದರು. ಪ್ರತಿ ಫಲಾನುಭವಿಗೆ ನುಗ್ಗೆ, ಬಾಳೆ, ಪಪ್ಪಾಯ, ತೆಂಗು ಸೇರಿದಂತೆ ಒಟ್ಟು 14 ಸಸಿಗಳನ್ನು ವಿತರಿಸಲಾಯಿತು. ತಾ.ಪಂ. ಸಹಾಯಕ ನಿರ್ದೇಶಕ ಎಚ್.ಡಿ.ಲೋಕೇಶ್, ಒಕ್ಕೂಟದ ಅಧ್ಯಕ್ಷರಾದ ಗೀತಾ ಚಿಲ್ಕುಂದ, ಸೌಮ್ಯ ಕಿರಂಗೂರು, ಸಿಬ್ಬಂದಿ ಹಾಜರಿದ್ದರು.