ನ್ಯೂಸ್

ನರಸಿಂಹಸ್ವಾಮಿ ಬಡಾವಣೆ ರಸ್ತೆಯಲ್ಲಿ ಸಂಚಾರ ಅಸಾಧ್ಯ!

ಹುಣಸೂರು: ಪಟ್ಟಣದ ನರಸಿಂಹಸ್ವಾಮಿ ಬಡಾವಣೆಗೆ (ಟ್ಯಾಲೆಂಟ್ ಸ್ಕೂಲ್ ಹಿಂಭಾಗ) ಸಂಪರ್ಕ ಕಲ್ಪಿಸುವ ರಸ್ತೆ ಕೆಸರುಗದ್ದೆಯಂತಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ.

ಬಡಾವಣೆ ವ್ಯಾಪ್ತಿ ಮತ್ತು ಪಕ್ಕದ ರಾಧಾಕೃಷ್ಣ ಬಡಾವಣೆ ಸೇರಿದಂತೆ 100ಕ್ಕೂ ಹೆಚ್ಚು ಮನೆಗಳಿವೆ. ಶಿಕ್ಷಕರು, ಸರ್ಕಾರಿ ನೌಕರರು ಇಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ ನಗರಸಭೆ ಇಲ್ಲಿಗೆ ಮೂಲ ಸೌಕರ್ಯ ಮಾತ್ರ ಒದಗಿಸಿಲ್ಲ. ಅದರಲ್ಲೂ ನರಸಿಂಹಸ್ವಾಮಿ ಬಡಾವಣೆ ವ್ಯಾಪ್ತಿಯಲ್ಲಿರುವ ಸ್ಮಶಾನದ ರಸ್ತೆಯಲ್ಲಂತೂ ಪಾದಚಾರಿಗಳೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ.

ಮೂರು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಂದು ಕಿ.ಮೀ.ಉದ್ದದ ಇಡೀ ರಸ್ತೆ ಕೆಸರುಗದ್ದೆಯಾಗಿದ್ದು, ನಾಟಿ ಮಾಡಿದಲ್ಲಿ ಉತ್ತಮ ಬೆಳೆ ಪಡೆಯುವಂತಿದೆ. ರಾತ್ರಿಯಾದರೆ ಬೀದಿದೀಪಗಳೂ ವಿರಳವಾಗಿರುವ ಈ ಜಾಗದಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದರೂ ಅನಧಿಕೃತ ಲೇಔಟ್ ಎನ್ನುವ ಕಾರಣ ನೀಡುತ್ತಾರೆ ಎಂದು ಬಡಾವಣೆ ನಿವಾಸಿ ರಾಮು ಬೇಸರ ವ್ಯಕ್ತಪಡಿಸುತ್ತಾರೆ.

50 ಲಕ್ಷ ರೂ.ವೆಚ್ಚದಲ್ಲಿ ಸ್ಮಶಾನದ ರಸ್ತೆ ಅಭಿವೃದ್ಧಿ(ರಸ್ತೆ ಮತ್ತು ಚರಂಡಿ ನಿರ್ಮಾಣ) ಕಾಮಗಾರಿಗೆ ತೆರಳಿದ್ದ ವೇಳೆ ರಸ್ತೆಯ ಜಾಗ ನಮ್ಮದೆಂದು ಹಲವರು ತಕರಾರು ತೆಗೆದು ಕಾಮಗಾರಿ ನಿಲ್ಲಿಸಿದ್ದಾರೆ. ಹಾಗಾಗಿ ಸರ್ವೇ ಇಲಾಖೆಯಿಂದ ಸರ್ವೇ ಮಾಡಿಸಿಕೊಡುವಂತೆ ತಹಸೀಲ್ದಾರ್‌ರಿಗೆ ಕೋರಿದ್ದು, ಇನ್ನೊಂದು ವಾರದಲ್ಲಿ ಸರ್ವೇ ಕಾರ್ಯ ನಡೆಯಲಿದೆ. ನಂತರ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುವುದು.
ಸದಾಶಿವಪ್ಪ, ಇಂಜಿನಿಯರ್, ನಗರಸಭೆ ಹುಣಸೂರು