ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ.ದೇವೇಗೌಡರನ್ನು ಬಂಧಿಸಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದಿದ್ದರೆ ಜಿ.ಟಿ. ದೇವೇಗೌಡರು ಮಗನ ಜತೆ ಜೈಲಿನಲ್ಲಿರಬೇಕಿತ್ತು ಎಂಬ ಶಾಸಕ ಎಚ್.ಡಿ.ರೇವಣ್ಣ ಅವರ ಹೇಳಿಕೆಗೆ ಶಾಸಕ ಜಿ.ಟಿ.ದೇವೇಗೌಡ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಯಾರು ರಾಜಕೀಯವಾಗಿ ದೂರು ಕೊಟ್ಟಿಲ್ಲ. ನನ್ನ ಮೇಲೆ ಯಾವ ಪ್ರಕರಣ ಇದೆ ಎಂದು ತೋರಿಸಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ, ಚುನಾವಣೆಯಲ್ಲಿ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅವರು ಎಂದೂ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಕೆಲಸ ಮಾಡಿಲ್ಲ ಎಂದರು.
ಸಿದ್ದರಾಮಯ್ಯ ಅವರ ಜತೆ 25 ವರ್ಷ ಇದ್ದೇನೆ. ಯಾವ ಅರ್ಥದಲ್ಲಿ ರೇವಣ್ಣ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ನನ್ನನ್ನು ಬಂಧಿಸುತ್ತಾರೆ ಬಿಡಿಸಿ ಎಂದು ಯಾರ ಬಳಿಯೂ ಕೇಳಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ರೇವಣ್ಣರನ್ನೇ ಕೇಳುತ್ತೇನೆ ಎಂದರು.
ನಮ್ಮ ತಂದೆ ಪಟೇಲ ಆಗಿದ್ದರು. ಈವರೆಗೂ ಯಾವುದೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ. ಸಾರ್ವಜನಿಕ ಜೀವನ ಪ್ರಾರಂಭ ಮಾಡಿ 54 ವರ್ಷ ಆಗಿದೆ. ನನ್ನ ಮಗ 2010ರಲ್ಲಿ ರಾಜಕೀಯ ಪ್ರಾರಂಭ ಮಾಡಿದ್ದಾನೆ. ನಮ್ಮ ಕುಟುಂಬದ ಯಾರ ಮೇಲೂ ಯಾವುದೇ ದೂರು ದಾಖಲಾಗಿಲ್ಲ. ಹುಣಸೂರಿಗೆ ಮುಖ್ಯಮಂತ್ರಿಗಳು ಬಂದಾಗ ನನ್ನ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎಂದು ನಾನು ಬಿಜೆಪಿಗೆ ಹೋಗಿದ್ದೆ. ಆ ವೇಳೆ ನಾನು ಗೃಹಮಂಡಳಿ ಅಧ್ಯಕ್ಷನಾದೆ. ಆ ವೇಳೆ ನಾನು ಏನೂ ಕೆಲಸ ಮಾಡಬಾರದು ಎಂದು ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ಪ್ರಯತ್ನ ಮಾಡಿದರು ಎಂದರು.
ನಾನು ಸಾಧ್ಯವಾದಷ್ಟು ಮಾಧ್ಯಮಗಳಿಂದ ದೂರ ಇದ್ದೇನೆ. ಏನನ್ನೂ ಮಾತನಾಡಬಾರದು ಎಂದು ತೀರ್ಮಾನ ಮಾಡಿದ್ದೇನೆ. ಆದರೆ ಯಾಕೆ ನನ್ನ ಹೆಸರನ್ನು ಪದೇ ಪದೆ ಹೇಳುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನನ್ನು ಗೆಲ್ಲಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವುದು ಹಾಗೂ ಕ್ಷೇತ್ರ ಅಭಿವೃದ್ಧಿಪಡಿಸುವುದು ಬಿಟ್ಟರೆ ಬೇರೆ ಯಾವುದೇ ಆಲೋಚನೆ ನನಗೆ ಇಲ್ಲ. 15 ವರ್ಷಕ್ಕೆ ನಮ್ಮ ತಂದೆಯವರು ತೀರಿಕೊಂಡರು. ಬಳಿಕ ನಮ್ಮ ಗ್ರಾಮದಲ್ಲಿ ನಾವಿಲ್ಲದೆ ಯಾವುದೇ ತೀರ್ಮಾನ ಮಾಡುತ್ತಿರಲಿಲ್ಲ. ಆಗಿನಿಂದಲೂ ಗ್ರಾಮ ನೈರ್ಮಲ್ಯ ಕೆಲಸ ಮಾಡುತ್ತಿದ್ದೇನೆ. ಅದಕ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು. ಹೀಗಾಗಿ ನಾನು ಎಲ್ಲ ರೀತಿಯ ಅನುಭವ ಪಡೆದಿದ್ದೇನೆ ಎಂದರು.