ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ 2ಎ ಮೀಸಲಾತಿ ಕುರಿತ ಹೋರಾಟದ ವಿರುದ್ಧ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ವಿವಾದಾತ್ಮಕ ಹೇಳಿಕೆ ನೀಡಿದ್ದು, ‘ನಮ್ಮ ಅನ್ನದ ತಟ್ಟೆಗೆ ಕೈ ಹಾಕಬೇಡಿ, ಮುಂದುವರಿದರೆ ಕೈಯನ್ನೇ ಕತ್ತರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಕುರಿತ ಸಾಧಕ-ಬಾಧಕ ಚರ್ಚಿಸುವ ಸಲುವಾಗಿ ಜಲದರ್ಶಿನಿ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಹಿಂದುಳಿದ ಸಮುದಾಯಗಳ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಒಂದು ಪೀಠದಲ್ಲಿ ಇದ್ದುಕೊಂಡು ರಾಜಕೀಯ ಪುಡಾರಿ ರೀತಿಯಲ್ಲಿ ಉದ್ಧಟತನದ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದಾರೆ. ಸನ್ಯಾಸಿಗಳಾಗಿ ಒಂದು ಜಾತಿಯ ಪರವಾಗಿ ಮಾತನಾಡುವುದು ಖಂಡನೀಯ. ನಮಗೂ ಮಾತನಾಡಲು ಬರುತ್ತದೆ. ಕಾವಿ ಬಟ್ಟೆ ಬಿಚ್ಚಿಟ್ಟು ಬನ್ನಿ. ಕಾವಿ ಬಟ್ಟೆಗೆ ನಾವು ಗೌರವ ಕೊಡುತ್ತಿದ್ದೇವೆ, ಅದನ್ನು ಉಳಿಸಿಕೊಳ್ಳಿ ಎಂದು ಎಚ್ಚರಿಸಿದರು.
ಅವರು ಬಿಜೆಪಿ ಏಜೆಂಟ್ ರೀತಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಜಯಮೃತ್ಯುಂಜಯ ಸ್ವಾಮೀಜಿ ಬಿಜೆಪಿಯಿಂದ ಸುಫಾರಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಪಂಚಮಸಾಲಿ ಸಮುದಾಯ ನಡೆಸುತ್ತಿರುವ ಹೋರಾಟಕ್ಕೆ ಕಿಡಿಕಾರಿದರು. ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಸ್ವಾಮೀಜಿಯಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಇದೇನಾ ನಿಮ್ಮ ರೀತಿ- ನೀತಿ? ಹಿಂದುಳಿದ ವರ್ಗಗಳು ವೀರಶೈವರು, ಲಿಂಗಾಯತರು ಒಂದಾಗಿ ಇದ್ದೇವೆ. ನಮ್ಮಗಳ ಮಧ್ಯೆ ಜಗಳ ತಂದು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬಾರದು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯಲ್ಲಿ ಮುಖಂಡರಾದ ಯೋಗೇಶ್, ಸುನೀಲ್ ನಾರಾಯಣ್, ಅಹಿಂದ ಶಿವಣ್ಣ ಇತರರಿದ್ದರು.