ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗಳ ಕಾರಣ ರಾಜ್ಯಕ್ಕೆ ನೀಡುವ ನೆರವಿನಲ್ಲಿ ನಬಾರ್ಡ್ ಶೇ.58ರಷ್ಟನ್ನು ಕಡಿತ ಮಾಡಿದೆ. ಹೀಗಾಗಿ ಇದನ್ನು ವಿರೋಧಿಸಿ ಡಿಸೆಂಬರ್ ತಿಂಗಳಲ್ಲಿ ರಾಜ್ಯ ರೈತ ಸಂಘ ಬೆಂಗಳೂರಿನ ನಬಾರ್ಡ್ ಕಚೇರಿ ಎದುರು ಪ್ರತಿಭಟನೆ ನಡೆಸಲಿದೆ ಎಂದು ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಬಾರ್ಡ್ ನೆರವು ಕಡಿತವು ಎಂಡಿಸಿಸಿ ಬ್ಯಾಂಕ್‌ಗಳು, ಸಹಕಾರ ಸಂಘಗಳು ಹಾಗೂ ಇನ್ನಿತರ ಬ್ಯಾಂಕ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ರೈತರು ಸಾಲ ಪಡೆಯಲು ಸಾಧ್ಯವಾಗದೇ ಖಾಸಗಿ ವ್ಯಕ್ತಿಗಳ ಮೊರೆ ಹೋಗಬೇಕಾಗುತ್ತದೆ. ಇವುಗಳ ಬಡ್ಡಿ ದರ, ದಮನಕಾರಿ ನೀತಿಯಿಂದಾಗಿ ಈಗಾಗಲೇ ಬಹಳಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಮುಂದುವರಿಯುತ್ತದೆ ಎಂದು ಶನಿವಾರ ಕಳವಳ ವ್ಯಕ್ತಪಡಿಸಿದರು.
ನಬಾರ್ಡ್ ಕಚೇರಿ ಎದುರು ಪ್ರತಿಭಟನೆ ನಡೆಸುವ ಸಂಬಂಧ ಬೆಂಗಳೂರಿನಲ್ಲಿ ರೈತ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ವೇಳೆ ಯಾವ ದಿನಾಂಕದಂದು ಪ್ರತಿಭಟನೆ ನಡೆಸಬೇಕೆಂಬುದನ್ನು ನಿರ್ಧರಿಸಲಾಗುವುದು ಎಂದರು.
ವಕ್ಫೃ್ ಎಂಬುದು ಅಲ್ಪ ಸಂಖ್ಯಾತರಿಗೆ ಸಂಬಂಧಿಸಿದ ಕಾನೂನು ಸಂಸ್ಥೆ. ಇದರ ಆಸ್ತಿಯನ್ನು ಮುಸ್ಲಿಮರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಇದೇ ವೇಳೆ ವಕ್ಫ್‌ನಿಂದಾಗಿ ರೈತರು ಜಮೀನು ಕಳೆದುಕೊಳ್ಳಲು ರೈತ ಸಂಘ ಬಿಡುವುದಿಲ್ಲ. ಈ ಕುರಿತಂತೆ ಸಿಎಂ ಹೇಳಿಕೆ ನೀಡಿದ್ದರೂ ಕಾಯಂ ಆಗಿ ರೈತರಿಗೆ ಹಕ್ಕುಪತ್ರ ನೀಡಬೇಕು. ಒಂದು ವೇಳೆ ಈ ರೀತಿ ಮಾಡದಿದ್ದಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪಿ. ಮರಂಕಯ್ಯ, ಹೊಸೂರು ಕುಮಾರ್, ನೇತ್ರಾವತಿ, ಮಂಡಕಳ್ಳಿ ಮಹೇಶ್ ಇದ್ದರು.