ನ್ಯೂಸ್

ನನ್ನ ವಿರುದ್ಧ ಸುಳ್ಳು ದೂರು ನೀಡಿ ಬೆದರಿಕೆ

ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ಸಾಮಾಜಿಕ ಹೋರಾಟಗಾರನಾದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ, ಸುಳ್ಳು ದೂರು ನೀಡಿ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಿಗೆ ತುರ್ತು ಸೂಚನೆ ನೀಡಬೇಕು ಎಂದು ಸ್ನೇಹಮಯಿ ಕೃಷ್ಣ ನಗರ ಪೊಲೀಸ್ ಆಯುಕ್ತರಿಗೆ ಪ್ರತಿದೂರು ನೀಡಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಬಗ್ಗೆ, ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 11/2024 ಸಂಖ್ಯೆಯ ಪ್ರಕರಣವನ್ನು ದಾಖಲು ಮಾಡಿಸಿರುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ತಪ್ಪನ್ನು ಪರೋಕ್ಷವಾಗಿ ಒಪ್ಪಿಕೊಂಡು, ಅವರ ಪತ್ನಿ ಪಾರ್ವತಿ ಹೆಸರಿನಲ್ಲಿ ಪಡೆದಿದ್ದ 14 ನಿವೇಶನವನ್ನು ಮರಳಿಸಿದ್ದಾರೆ. ಈ ಅಂಶಗಳನ್ನು ಗಮನಿಸಿದಾಗ, ನನ್ನ ಕಾನೂನುಬದ್ಧ ಹೋರಾಟಕ್ಕೆ ಮಣಿದ ಮುಖ್ಯಮಂತ್ರಿಗಳು ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆಯೇ ಹೊರತು, ನನ್ನ ರೌಡಿಸಂಗೆ ಹೆದರಿ ಕೊಟ್ಟಿಲ್ಲ. ಈ ಅಂಶಗಳನ್ನು ಗಮನಿಸಿದಾಗ, ನಾನೊಬ್ಬ ಸಾಮಾಜಿಕ ಹೋರಾಟಗಾರನೇ ಹೊರತು ರೌಡಿ ಚಟುವಟಿಕೆಯುಳ್ಳ ಸಮಾಜಘಾತುಕ ಎಂದು ತಿಳಿದು ಬರುವುದಿಲ್ಲ ಎಂದಿದ್ದಾರೆ.

ಸ್ಪೇಷಲ್ ಕೇಸ್ 66/2011ರಲ್ಲಿ ತೀರ್ಪು ನೀಡಿರುವ ಮಾನ್ಯ 6ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾನೊಬ್ಬ ಸಾಮಾಜಿಕ ಹೋರಾಟಗಾರ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಹವ್ಯಾಸವುಳ್ಳವರು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ನನ್ನ ವಿರುದ್ಧ ದ್ವೇಷ ಭಾವನೆ ಹೊಂದಿರುವ ಪೊಲೀಸ್ ಅಧಿಕಾರಿಗಳು ಸುಳ್ಳು ಪ್ರಕರಣಗಳನ್ನು ದಾಖಲಿಸಿರುವುದು ಕಂಡು ಬಂದಿರುತ್ತದೆ ಎಂದು ಸಹ ತಿಳಿಸಿರುತ್ತದೆ.

ವಾಸ್ತವಾಂಶ ಹೀಗಿದ್ದರು ಸಹ ನನ್ನ ವಿರುದ್ಧ ದ್ವೇಷ ಭಾವನೆ ಬೆಳೆಸಿಕೊಂಡಿರುವ ಕೆಲವು ಆರೋಪಿತ ವ್ಯಕ್ತಿಗಳು ಮತ್ತು ಪೊಲೀಸ್ ಅಧಿಕಾರಿಗಳು ನನ್ನ ವಿರುದ್ದ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿರುವುದನ್ನು ಹಾಗೂ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ತೆರೆದಿರುವುದನ್ನು ಆಧರಿಸಿ, ನನ್ನ ವಿರುದ್ಧ ಪದೇ ಪದೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರು ದೇವರಾಜ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ದೂರರ್ಜಿ ನೀಡಿ, 105/2024 ಸಂಖ್ಯೆಯ ಮೊಕದ್ದಮೆಯನ್ನು ದಾಖಲು ಮಾಡಿದ್ದಾರೆ. ಈ ದಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನನ್ನನ್ನು ಗಡಿಪಾರು ಮಾಡಲು ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಬಂಧಿಸಲು ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೆ, ನನ್ನನ್ನು ಬಂಧಿಸದಿದ್ದಲ್ಲಿ ನಾಳೆಯಿಂದ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಆದ್ದರಿಂದ, ಅವರು ನೀಡಿರುವ ದೂರರ್ಜಿಯನ್ನು ಆಧರಿಸಿ, ಎಂ.ಲಕ್ಷ್ಮಣ್ ಗೆ ತುರ್ತು ನೋಟಿಸ್ ಜಾರಿ ಮಾಡಿ ಅವರಿಂದ ಸ್ಪಷ್ಟೀಕರಣ ಮತ್ತು ದಾಖಲಾತಿಗಳನ್ನು ಪಡೆದುಕೊಂಡು ಸತ್ಯಾಸತ್ಯತೆಯನ್ನು ತಿಳಿದುಕೊಂಡು ಅವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಪೊಲೀಸ್ ನಿರೀಕ್ಷಕರಿಗೆ ಸೂಕ್ತ ಸೂಚನೆ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.