ಬಿಡದಿ : ಹೋಬಳಿಯ ಕೆ.ಗೋಪಳ್ಳಿ-ಚೌಕಹಳ್ಳಿ ನಡುವೆ ಇರುವ ಸೇತುವೆಯ ಮೇಲಿಂದ ಶನಿವಾರ ಆಕಸ್ಮಿಕವಾಗಿ ವೃಷಭಾವತಿ ನದಿಗೆ ಬಿದ್ದಿರುವ ಯುವಕನಿಗಾಗಿ ಹುಡುಕಾಟ ನಡೆಯುತ್ತಿದ್ದು, ಭಾನುವಾರ ಸಂಜೆಯಾದರೂ ಪತ್ತೆಯಾಗದಿದ್ದರಿಂದ ಕುಟುಂಬಸ್ಥರಲ್ಲಿ ಆತಂಕ ಮೂಡಿದೆ.
ಚೌಕಹಳ್ಳಿಯ ರವೀಂದ್ರನಾಥ ರೆಡ್ಡಿ ಪುತ್ರ ಕೌಶಿಕ್ (27) ನಾಪತ್ತೆಯಾಗಿರುವ ಯುವಕ . ಈತ ಇಂಗ್ಲೆಂಡ್‌ನಲ್ಲಿ ಎಂಬಿಎ ದ್ವಿತೀಯ ವಷರ್ ವಿದ್ಯಾಭ್ಯಾಸ ಮಾಡುತ್ತಿದ್ದ. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ೆಬ್ರವರಿ ತಿಂಗಳಲ್ಲಿ ಸ್ವ-ಗ್ರಾಮಕ್ಕೆ ಬಂದಿದ್ದ. ಶನಿವಾರ ಸಂಜೆ ಮನೆಯಿಂದ ಹೊರಗೆ ಹೋದಾಗ ನದಿಯಲ್ಲಿ ಬಿದ್ದಿದ್ದು, ಈಗ ಯಾವ ಸ್ಥಿತಿಯಲ್ಲಿದ್ದಾನೆ ಎಂಬ ಮಾಹಿತಿ ಖಚಿತವಾಗಿಲ್ಲ.
‘ಶನಿವಾರ ರಾತ್ರಿ 10 ಗಂಟೆ ಸುಮಾರಿನಲ್ಲಿ ಸ್ನೇಹಿತರ ಜತೆಗೂಡಿ ಕೆ.ಗೋಪಳ್ಳಿ-ಚೌಕಹಳ್ಳಿ ನಡುವೆ ಇರುವ ವೃಷಭಾವತಿ ನದಿ ಪಾತ್ರಕ್ಕೆ ತೆರಳಿದ್ದಾಗ, ಸೇತುವೆಯ ಸಣ್ಣ ಗೋಡೆಯ ಮೇಲೆ ಕೌಶಿಕ್ ಮೊಬೈಲ್‌ನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಆಯತಪ್ಪಿ ನೀರಿಗೆ ಬಿದ್ದುಬಿಟ್ಟ. ಆತನನ್ನು ರಕ್ಷಿಸಲು ನಾನು ಸಹ ನೀರಿಗೆ ಧುಮುಕಿದೆ.
ಕಲುಷಿತ ನೀರಿನ ನೊರೆ ಇಬ್ಬರನ್ನೂ ಸುತ್ತುವರಿಯಿತು. ಕತ್ತಲಾಗಿದ್ದರಿಂದ ನೀರಿನಲ್ಲಿ ಏನೂ ಕಾಣಲಿಲ್ಲ. ನನ್ನನ್ನು ಸೇತುವೆ ಬಳಿ ಇದ್ದವರು ರಕ್ಷಣೆ ಮಾಡಿದರು’ ಎಂದು ಕೌಶಿಕ್‌ನ ಸ್ನೇಹಿತ ಈಶ್ವರ ಅಸಹಾಯಕತೆ ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಶಾಸಕ ಎ.ಮಂಜುನಾಥ್, ಬಿಡದಿ ಪಿಎಸ್‌ಐ ಪ್ರಕಾಶ್ ಆಗಮಿಸಿ ಸ್ಥಳೀಯರಿಂದ ಮಾಹಿತಿ
ಪಡೆದು ಪರಿಶೀಲಿಸಿದರು.
ಪತ್ತೆಯಾಗದ ಸುಳಿವು: ಕೌಶಿಕ್ ಪತ್ತೆಗಾಗಿ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಜಿಲ್ಲಾ ಮಟ್ಟದ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡ ಆಗಮಿಸಿದೆ. ರಾತ್ರಿ ಸಮಯ ಆಗಿದ್ದರಿಂದ ಕಾರ್ಯಚರಣೆ ಮಾಡಲು ಸಾಧ್ಯವಾಗಲಿಲ್ಲ. ಮರುದಿನ ಭಾನುವಾರ ಬೆಳಗ್ಗೆ ಅಗ್ನಿ ಶಾಮಕ
ಸಿಬ್ಬಂದಿ ಒಬಿಎಂ ಮತ್ತು ಸ್ಥಳೀಯರ ನಾಡದೋಣಿ ಬಳಸಿ ಕಾರ್ಯಚರಣೆ ನಡೆಸಿದರಾದರೂ ಯುವಕನ ಸುಳಿವು ಪತ್ತೆಯಾಗಲಿಲ್ಲ. ನದಿಯಲ್ಲಿ ಕಲುಷಿತ ನೀರು, ರಾಸಾಯನಿಕಯುಕ್ತ ನೊರೆ ಜಾಸ್ತಿ ಇರುವುದರಿಂದ ಕಾರ್ಯಾಚರಣೆಗೆ ತೊಂದರೆಯಾಗಿದೆ.
ಸಾರ್ವಜನಿಕರ ಆಕ್ರೋಶ : ಭೈರಮಂಗಲದಿಂದ ಹರಿಯುವ ವೃಷಭಾವತಿ ನದಿಗೆ ಕೆ.ಗೋಪಳ್ಳಿ-ಚೌಕಹಳ್ಳಿ ನಡುವೆ ಹಲವು ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಸೇತುವೆ ನಿರ್ಮಿಸಿದ್ದಾರೆ. ಈಗ ಬೈರಮಂಗಲ ಕೆರೆಗೆ ನೀರು ತಪ್ಪಿಸಿ ನದಿಗೆ ನೀರು ನೇರವಾಗಿ ಹರಿಯುತ್ತಿರುವುದರಿಂದ ಹರಿವಿನ ಪ್ರಮಾಣ ಹೆಚ್ಚಿದ್ದು, ಸೇತುವೆಗೆ ತಡೆಗೋಡೆ ಸಹ ಇಲ್ಲವಾಗಿದೆ. ಈ ಸೇತುವೆಯ ಮುಖಾಂತರ ಸಾವಿರಾರು ಜನರು ಓಡಾಟ ನಡೆಸುತ್ತಿದ್ದು ಜನರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಸಾವು : ಕೌಶಿಕ್‌ನ ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳದಲ್ಲಿಯೇ ಚೌಕಹಳ್ಳಿ ಗ್ರಾಮದ ಪ್ರಶಾಂತ್ (40) ಎಂಬಾತ ವೃಷಭಾವತಿ ನದಿಗೆ ಬಿದ್ದು ಮೃತಪಟ್ಟಿದ್ದಾರೆೆ. ಯುವಕನ ಪತ್ತೆ ಕಾರ್ಯಾಚರಣೆ ವೀಕ್ಷಿಸುತ್ತಿದ್ದ ಪ್ರಶಾಂತ್, ಭಾನುವಾರ ನೋಡ ನೋಡುತ್ತಿದ್ದಂತೆ ಸೇತುವೆ ಮೇಲಿಂದ ನದಿಗೆ ಬಿದ್ದಿದ್ದಾನೆ. ಪ್ರಶಾಂತ್‌ನನ್ನು ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಮೇಲೆತ್ತಿ, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಭೀಮನ ಅಮವಾಸ್ಯೆ ಹಾಗೂ ಹಿಂದಿನ ದಿನ ಚೌಕಹಳ್ಳಿ ಗ್ರಾಮದಲ್ಲಿ ನಡೆದ ಎರಡು ದುರ್ಘಟನೆಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.