ಪಿರಿಯಾಪಟ್ಟಣ: ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಪ್ರತಿ ಮನೆಗೆ 5 ರಿಂದ 6 ಸಾವಿರ ರೂ. ಖರ್ಚು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಮ್ಮ ಪಕ್ಷ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಹಾಮೌನಿಯಾಗಿದ್ದಾರೆ. ಒಂದು ದಿನವೂ ರೈತರ ಪರವಾಗಿ ಮಾತನಾಡಿಲ್ಲ. ಎರಡು ಕೋಟಿ ಉದ್ಯೋಗದ ಭರವಸೆಯ ಬಗ್ಗೆ ಮಾತನಾಡುವುದಿಲ್ಲ. ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ದೇಶದಲ್ಲಿರುವ ಎಲ್ಲರ ಖಾತೆಗಳಿಗೆ 15 ಲಕ್ಷ ರೂ. ಹಣ ಹಾಕುತ್ತೇವೆ ಎನ್ನುವ ಭರವಸೆ ಕೊಟ್ಟಿದ್ದರ ಬಗ್ಗೆ ಮಾತನಾಡುವುದಿಲ್ಲ. ಆದರೆ ಬಿಲ್ ಗೇಟ್ಸ್ ಜತೆ ಚರ್ಚೆ ನಡೆಸಿ ಗ್ರಾಮೀಣ ಪ್ರದೇಶಕ್ಕೆ ತಂತ್ರಜ್ಞಾನ ತರುವ ಬಗ್ಗೆ ಅವರಿಗೆ ಆಸಕ್ತಿ ಇದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಜತೆಗೆ ಸಮಾನಾಂತರ ಅಂತರ ಕಾಯ್ದುಕೊಳ್ಳುವುದಾಗಿ ಹೇಳುತ್ತಿದ್ದ ಜೆಡಿಎಸ್ ಮುಖಂಡರು, ಒಮ್ಮೆ ಬಿಜೆಪಿ ಬೆಂಬಲದಿಂದ, ಮತ್ತೊಮ್ಮೆ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಮೂಲಕ ಅಧಿಕಾರಕ್ಕಾಗಿ ಯಾರ ಜತೆ ಬೇಕಾದರೂ ಸೇರುತ್ತೇವೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ದೇವೇಗೌಡರು ಈಗ ಅಳಿಯನನ್ನು ಬಿಜೆಪಿಗೆ ಕಳುಹಿಸಿ ಕೊಟ್ಟಿದ್ದಾರೆ. ಸ್ವಲ್ಪ ದಿನಗಳ ನಂತರ ತಾವು ಬಿಜೆಪಿಗೆ ಹೋಗಿ ವಿಲೀನಗೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯನ್ನು ನಾವು ಗೆಲ್ಲಲೇಬೇಕೆಂದು ಗಂಭೀರವಾಗಿ ಪರಿಗಣಿಸಬೇಕಿದೆ. ಕಳೆದ ಎಲ್ಲ ಲೋಕಸಭಾ ಚುನಾವಣೆಗಳಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷಕ್ಕೆ 20,000ಕ್ಕೂ ಹೆಚ್ಚು ಅಂತರದಲ್ಲಿ ಮತಗಳ ಮುನ್ನಡೆ ಕೊಡಿಸಿದ್ದೇವೆ. ಈ ಬಾರಿ ಇನ್ನೂ ಹೆಚ್ಚಿನ ಮುನ್ನಡೆ ಕೊಡಿಸುವ ಜವಾಬ್ದಾರಿಯೊಂದಿಗೆ ಕೆಲಸ ನಿರ್ವಹಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಅಭ್ಯರ್ಥಿ ಎಂ.ಲಕ್ಷ್ಮಣ್ ಮಾತನಾಡಿ, ಕಾಂಗ್ರೆಸ್ ಪಕ್ಷವು ನನ್ನಂತ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಲೋಕಸಭೆಯ ಟಿಕೆಟ್ ನೀಡಿದೆ. ನಾನು ಬಿಜೆಪಿ ಅಭ್ಯರ್ಥಿಯ ರೀತಿ ಅರಮನೆಯಲ್ಲಿ ವಾಸವಾಗಿಲ್ಲ. ಚಿಕ್ಕದೊಂದು ಮನೆಯಲ್ಲಿ ವಾಸವಾಗಿದ್ದೇನೆ. ಯಾವುದೇ ಸಮಯದಲ್ಲೂ ನಿಮ್ಮ ಕೈಗೆ ಸಿಗುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಮಾಜಿ ಶಾಸಕ ಡಾ.ಯತಿಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾಅಮರ್ ನಾಥ್, ಮುಖಂಡ ಎಚ್.ಡಿ.ಗಣೇಶ್ ಮಾತನಾಡಿದರು.
ಕೆಪಿಸಿಸಿ ಸದಸ್ಯ ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಹಮತ್ ಜಾನ್ ಬಾಬು, ಡಿ.ಟಿ.ಸ್ವಾಮಿ, ಮುಖಂಡರಾದ ಕೆ.ಹೊಲದಪ್ಪ, ಮಾನ್ಸೂನ್ ಚಂದ್ರು, ಸಿ.ತಮ್ಮಣ್ಣಯ್ಯ, ಶೇಖರ್, ಕೆ.ಆರ್.ನಿರೂಪಾ, ಎಸ್.ಟಿ.ಸರಸ್ವತಿ, ಬಿ.ಎಲ್.ಅನಿತಾ, ಬಿ.ಎಂ.ರಾಮು ಹಾಜರಿದ್ದರು.