ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ನ.10ರಂದು ಸಂಜೆ 6.30ಕ್ಕೆ ನಟನ ಪಯಣ ರೆಪರ್ಟರಿ ತಂಡದ ಕಣಿವೆಯ ಹಾಡು ನಾಟಕ ಪ್ರದರ್ಶನವಾಗಲಿದೆ.
ನಾಟಕದ ರಚನೆ ಅತೊಲ್ ಫ್ಯೂಗಾರ್ಡ್ ಅವರದ್ದು. ಡಾ. ಮೀರಾ ಮೂರ್ತಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದು, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರು ನಾಟಕಕ್ಕೆ ಸಂಗೀತ ನೀಡಿದ್ದಾರೆ. ನಟನದ ಮೇಘಾ ಸಮೀರ ಮತ್ತು ದಿಶಾ ರಮೇಶ್ ಅಭಿನಯಿಸುತ್ತಿದ್ದು ನಾಡಿನ ಹೆಸರಾಂತ ರಂಗತಜ್ಞ ಡಾ. ಶ್ರೀಪಾದ ಭಟ್ ಅವರು ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.
ಮೂಲತಃ ದಕ್ಷಿಣ ಆಫ್ರಿಕಾ ನೆಲದ ಕತೆಯಿದು. ಆದರೆ ಎಲ್ಲ ಶ್ರೇಷ್ಠ ಕೃತಿಗಿರುವಂತೆಯೇ ಈ ಕತೆಗೂ ದೇಶ, ಕಾಲ ಮೀರಿದ ಪ್ರಸ್ತುತಿಯ ಅಪಾರ ಸಾಧ್ಯತೆ ಇದೆ. ಅಂತಹ ಪ್ರಯತ್ನವಿದು. ಕಣಿವೆಯ ಹಾಡು ಕಣಿವೆ ದಾಟುವ, ಕಣಿವೆಯೊಳಗಿನ ಬದುಕು ತನ್ನ ಹಾಡು ಮುಂದುವರಿಸುವ ಸಂಘರ್ಷದ ಕತೆ ಇದು. ನಮ್ಮದೇ ನೆಲದಲ್ಲಿ ಪರಕೀಯರಾಗುತ್ತ, ಗುಲಾಮರಾಗುತ್ತ ಹೋಗುತ್ತಿರುವ ಮೂಲನಿವಾಸಿಗಳ ಬದುಕನ್ನೂ, ಪುಟ್ಟ ಬೀಜಗಳು ದೊಡ್ಡದಾಗಿ ಕಾಯಿ ಬಿಡುವ ನೆಲದ ಪವಾಡಗಳನ್ನೂ, ಸಾಕಷ್ಟು ಅಪಾಯಗಳಿದ್ದರೂ ಬಿಡುಗಡೆಯ ಕನಸನ್ನು ಬಿತ್ತುವ ನಗರಗಳನ್ನೂ ಒಟ್ಟಾಗಿ ಇಡುವ ನಾಟಕವು ಈ ಎಲ್ಲ ಬಗೆಯ ಚರ್ಚೆಗಳನ್ನೂ ಸಮತೂಕದಲ್ಲಿರಿಸುತ್ತಿದೆ. ಬದುಕನ್ನು ಕಪ್ಪು ಬಿಳುಪು ಆಗಿ ನೋಡದಂತೆ, ತಾತ್ವಿಕವಾಗಿ ಬದುಕನ್ನು ನೋಡುವಂತೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಪ್ರಸ್ತುತ ನಾಟಕದಲ್ಲಿ ನಾಟಕಕಾರನ ಪಾತ್ರ ಹಾಗೂ ಅಜ್ಜ ಬಕ್ಸ್‌ನ ಪಾತ್ರ ಎರಡನ್ನೂ ಒಬ್ಬರೇ ನಿರ್ವಹಿಸಬೇಕು ಎಂದು ಒತ್ತಾಯಿಸುವ ಲೇಖಕರು, ಈ ಮೂಲಕ ಯಾವುದೋ ಒಂದು ವಾದದ ಕಡೆ, ಭಾವುಕವಾಗಿ ಒಂದೆಡೆ ವಾಲದೇ ಇರುವಂತೆ ನಮ್ಮನ್ನು ನಿರ್ದೇಶಿಸಿದ್ದಾರೆ.