ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ವಾದ ಮಾಡಲು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಅನಿಲ್ ಸಿ.ನಿಶಾನಿ ಮತ್ತು ಸಿದ್ಧಾರ್ಥ್ ಲೂತ್ರಾ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜ್, ಅನುಕುಮಾರ್, ಲಕ್ಷ್ಮಣ್, ಜಗದೀಶ್ ಮತ್ತು ಪ್ರದೂಷ್‌ಗೆ ಹೈಕೋರ್ಟ್ ಡಿ.೧೩ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದೀಗ ಹೈಕೋರ್ಟ್‌ನ ಜಾಮೀನು ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದರಿಂದ ಈ ಏಳು ಮಂದಿ ಆರೋಪಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.
೭ ದಿನಗಳಲ್ಲಿ ಮೇಲ್ಮನವಿ ಸಲ್ಲಿಕೆ:
ರಾಜ್ಯ ಸರ್ಕಾರದ ಅನುಮತಿ ಬೆನ್ನಲ್ಲೇ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಆರಂಭಿಸಿದ್ದಾರೆ. ಸರ್ಕಾರಿ ಅಭಿಯೋಜಕರ ನೆರವಿನಿಂದ ಪ್ರಕರಣದ ದೋಷಾರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲಿಷ್‌ಗೆ ತರ್ಜುಮೆ ಮಾಡಿಸಲು ಮುಂದಾಗಿದ್ದಾರೆ. ಇನ್ನೊಂದು ವಾರದೊಳಗೆ ದಾಖಲೆಗಳು ಹಾಗೂ ಅರ್ಜಿಯನ್ನು ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದುರ್ಗದ ರೇಣುಕಸ್ವಾಮಿಯನ್ನು ಜೂ.೮ರ ರಾತ್ರಿ ಪಟ್ಟಣಗೆರೆಯ ಶೆಡ್‌ವೊಂದರಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು.
Another trouble for actor Darshan and the gang