ನಂಜನಗೂಡು: ಕಾನೂನಾತ್ಮಕವಾಗಿ ನಿಷೇಧಗೊಂಡಿರುವ ಪದವನ್ನು ಬಳಸಿ ದಲಿತ ಸಮುದಾಯದ ಜನರ ಭಾವನೆಯನ್ನು ಕೆರಳಿಸಿರುವ ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಛಲವಾದಿ ಮಹಾಸಭಾ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ವಿಶ್ವೇಶ್ವರಯ್ಯ ವೃತ್ತದಲ್ಲಿ ಸಂಘಟಿತರಾದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಣ್ಣಿಗೆ ಕಪ್ಪು ಪಟ್ಟಿ ಧರಿಸಿ ಪಾದಯಾತ್ರೆ ಮೂಲಕ ಎಂಜಿಎಸ್ ರಸ್ತೆಯಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಕೆಲ ಸಮಯ ಧರಣಿ ನಡೆಸಿದರು.
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿನಾಗಭೂಷಣ್ ಮಾತನಾಡಿ, ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಒಂದು ಜಾತಿಯನ್ನು ಕೀಳಾಗಿ ಹೋಲಿಕೆ ಮಾಡುವ ಮೂಲಕ ತಮ್ಮ ಕೀಳುತನವನ್ನು ಪ್ರದರ್ಶಿಸಿದ್ದಾರೆ. ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತಂದಿರುವ ಇಬ್ಬರ ವಿರುದ್ಧ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೆ ಸೌಜನ್ಯಾ ಅತ್ಯಾಚಾರ ಪ್ರಕರಣವನ್ನು ಮರು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಉಮೇಶ್‌ರಾಜ್, ನಗರ ಘಟಕದ ಅಧ್ಯಕ್ಷ ರಾಜೇಂದ್ರ, ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ವಿಜಯ್‌ಕುಮಾರ್, ದಸಂಸ ಸಂಚಾಲಕ ಹಗಿನವಾಳು ಚಿಕ್ಕಣ್ಣ, ಪತ್ರಕರ್ತ ಕೆ.ದೀಪಕ್, ೆಟೋ ಸಿದ್ದು, ಬದನವಾಳು ಪ್ರಶಾಂತ್, ನಗರಸಭಾ ಸದಸ್ಯ ಯೋಗೀಶ್ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.