ನ್ಯೂಸ್

ನಗರಸಭೆಗೆ ಜನಸಾಮಾನ್ಯರ ಅಲೆದಾಟ

ಸಾಗರ: ನಗರಸಭೆಯಲ್ಲಿ ಇ-ಸ್ವತ್ತು ನೀಡಲು ಜನರನ್ನು ಅಲೆದಾಡಿಸಲಾಗುತ್ತದೆ. ಪ್ರತಿಯೊಂದು ಕೆಲಸವೂ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಬಿಜೆಪಿ ಸದಸ್ಯರು, ಮುಖಂಡರು ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಮುಖ್ಯಮಂತ್ರಿಗಳು ತಕ್ಷಣ ಶ್ವೇತಪತ್ರ ಹೊರಡಿಸಬೇಕು. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಿಂತ ನೀರಾಗಿದೆ. ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬಿಜೆಪಿ ಅವಧಿಯಲ್ಲಿ ತಂದಿರುವ ಅನುದಾನದ ಕಾಮಗಾರಿಗಳು ಸಹ ಅನುಷ್ಠಾನಕ್ಕೆ ಬರುತ್ತಿಲ್ಲ. ಕಾಂಗ್ರೆಸಿಗರು ಬರೀ ಪ್ರಚಾರದಲ್ಲಿ ತೊಡಗಿದ್ದಾರೆಯೇ ಹೊರತು ಯಾವುದೇ ಕೆಲಸ ಆಗುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.

ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ, ಬೀದಿದೀಪ ಅಳವಡಿಕೆ ಮತ್ತಿತರ ಕಾರ್ಯಗಳು ನಡೆಯುತ್ತಿಲ್ಲ. ಸೊರಬ ರಸ್ತೆ ವಿಸ್ತರಣೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಹಾಲಪ್ಪ ಹರತಾಳು 100 ಕೋಟಿ ರೂ. ಅನುದಾನ ತಂದಿದ್ದರು. ಆ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಸಾಗರಕ್ಕೆ ಯಾವುದೇ ಹೊಸ ಕಾಮಗಾರಿಯನ್ನು ಶಾಸಕರು ತಂದಿಲ್ಲ. ಕೇಂದ್ರ ಸರ್ಕಾರದ, ನಗರಸಭೆ ಸಾಮಾನ್ಯ ನಿಧಿಯಿಂದ ಮಂಜೂರಾದ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ಗೆ 5 ಲಕ್ಷ ರೂ. ಬಂದಿದ್ದು ಬಿಟ್ಟರೆ ಬೇರ‌್ಯಾವುದೇ ಅನುದಾನ ಬಂದಿಲ್ಲ ಎನ್ನುವುದನ್ನು ನಾನು ದಾಖಲೆ ಸಹಿತ ಸಾಬೀತುಪಡಿಸುತ್ತೇನೆ. ನಗರಸಭೆಯಲ್ಲಿ ಜನರ ಕೆಲಸವಾಗುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್, ವಿ.ಮಹೇಶ್, ಪ್ರೇಮಸಿಂಗ್, ಪ್ರಮುಖರಾದ ಸವಿತಾ ವಾಸು, ಮೈತ್ರಿ ಪಾಟೀಲ್, ಭಾವನಾ ಸಂತೋಷ್, ಶಂಕರ್ ಅಳ್ವಿಕೋಡಿ, ತುಕಾರಾಮ್, ಕುಸುಮಾ ಸುಬ್ಬಣ್ಣ, ಸತೀಶ್, ಪರಶುರಾಮ್, ಪ್ರಶಾಂತ್, ಸುಧಾ, ಸಂತೋಷ್, ಉದಯ್, ಮಹೇಶ್, ಕೃಷ್ಣಶೇಟ್, ಸಂತೋಷ್ ಶೇಟ್, ಶ್ರೀರಾಮ್, ಗೋಪಾಲ್ ಇತರರಿದ್ದರು.