ನ್ಯೂಸ್

ನಗರಸಭೆ ಪೌರಕಾರ್ಮಿಕರ ಶೋಷಣೆ / ಕಾಯ್ದೆಗಳ ಉಲ್ಲಂಘನೆ / ವಾರದ ರಜೆ ಮತ್ತು ಸಾಂದರ್ಭಿಕ ರಜೆ ಇಲ್ಲ / ದುಡಿಮೆಗೆ ತಕ್ಕಂತೆ ಸಂಬಳವಿಲ್ಲ / ಪೌರಕಾರ್ಮಿಕರ ಅಳಲು

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ನಗರ ದಿನೇ ದಿನೇ ಬೆಳೆಯುತ್ತಿದೆ. ನಗರದಲ್ಲಿ ಜನಸಂಖ್ಯೆಯು ಹೆಚ್ಚುತ್ತಿದೆ. ಆದರೆ ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆಯಿದ್ದು, ಇರುವ ಪೌರಕಾರ್ಮಿಕರೇ ನಗರವನ್ನು ಸ್ವಚ್ಛಗೊಳಿಸಬೇಕಾಗಿದೆ. ಪೌರಕಾರ್ಮಿಕರಿಗೆ ವಾರದ ರಜೆ ಸೇರಿದಂತೆ ಸಾಂದರ್ಭಿಕ ರಜೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಪೌರಕಾರ್ಮಿಕರ ಅಳಲಾಗಿದೆ.

ಕೋಲಾರ ನಗರದಲ್ಲಿ ೩೫ ವಾರ್ಡುಗಳಿದ್ದು, ಸುಮಾರು ೨ ಲಕ್ಷ ಜನಸಂಖ್ಯೆ ಹೊಂದಿದ್ದು, ಸರ್ಕಾರದ ನಿಯಮಾನುಸಾರ ೭೦೦ ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರ ನೇಮಕಾತಿ ಅಗತ್ಯ ಇದೆ. ಆದರೆ ಕೊಲಾರ ನಗರಸಭೆಯಲ್ಲಿ ಪ್ರಸ್ತುತ ೨೧೪ ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಸ ವಿಲೇವಾರಿ ಮಾಡುವ ಟ್ರಾಕ್ಟರ್, ಮಿನಿ ಟೆಂಪೋ, ಸಿಕ್ಕಿಂಗ್ ವಾಹನ ಚಾಲಕರು ಸೇರಿದ್ದಾರೆ. ಆದರೆ ಪ್ರಸ್ತುತ ನಗರಸಭೆಗೆ ೩೫೦ ಪೌರಕಾರ್ಮಿಕರ ಅವಶ್ಯಕತೆ ಇದೆ.

ಇರುವ ಕಾರ್ಮಿಕರಲ್ಲಿ ಶೇ.೩೦ ರಷ್ಟು ಕಾರ್ಮಿಕರು ಚಾಲಕರಾಗಿ ಹಾಗೂ ಕಸ ವಿಲೇವಾರಿ ಮತ್ತು ಸಿಕ್ಕಿಂಗ್ ವಾಹನಗಳಿಗೆ ಹೆಚ್ಚುವರಿಯಾಗಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದರಿಂದ ಸ್ವಚ್ಛತೆಗೆ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ನಗರದಲ್ಲಿ ಕಸ ವಿಲೇವಾರಿಯಾಗದೆ ಕೊಳೆಯುವಂತಾಗಿದೆ. ಆದರೆ ಇರುವ ಕಾರ್ಮಿಕರ ಮೇಲೆಯೇ ಒತ್ತಡ ತಂದು ಅಧಿಕಾರಿಗಳು ಸ್ವಚ್ಛತೆ ಮಾಡಿಸಲು ಮುಂದಾಗಿದ್ದು, ಕಾರ್ಮಿಕರಿಗೆ ವಾರದ ರಜೆ ಸೇರಿದಂತೆ ಸಾಂದರ್ಭಿಕ ರಜೆ ಪಡೆಯಲು ಸಾಧ್ಯವಾಗುತ್ತಿಲ್ಲವೆಂಬುದು ಅವರ ಆರೋಪವಾಗಿದೆ.

ಇದಲ್ಲದೆ ಕಾರ್ಮಿಕರಿಂದ ಸರ್ಕಾರದ ನಿಯಮಾವಳಿಗಳ ವಿರುದ್ಧವಾಗಿ ಅವಧಿಗಿಂತ ಹೆಚ್ಚಾಗಿ ದುಡಿಸಿಕೊಳ್ಳುತ್ತಿದ್ದಾರೆ. ೨ನೇ ಶನಿವಾರ ಮತ್ತು ೪ನೇ ಶನಿವಾರಗಳಂದು ಕೆಲಸ ನಿರ್ವಹಿಸಬೇಕಾಗಿದೆ. ಈಗಾಗಲೇ ರಾಜ್ಯ ಕರ್ಮಚಾರಿಗಳ ಆಯೋಗಕ್ಕೆ ಮನವಿ ಸಲ್ಲಿಸಿದ್ದರು, ನಮ್ಮ ಮನವಿಗೆ ಸ್ಪಂಧನೆಯಾಗುತ್ತಿಲ್ಲವೆAಬುದು ಕಾರ್ಮಿಕ ವಲಯದಲ್ಲಿ ಕೇಳಿಬರುತ್ತಿದೆ.

ಸಾರ್ವಜನಿಕರು ನಗರದಲ್ಲಿ ಎಲ್ಲೆಂದರಲ್ಲಿ ಹಸಿ ಕಸ ಮತ್ತು ಒಣ ಕಸವನ್ನು ಸುರಿಯುತ್ತಿರುವುದರಿಂದ ಕೊಳೆತು ದುರ್ವಾಸನೆ ಬರುವಂತೆ ಆಗಿದೆ. ಆ ಕಸವನ್ನು ವಿಲೇವಾರಿ ಮಾಡಲು ಹೋಗುವಾಗ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಣಗಳಾದ ಕೈಚೀಲ, ಕಾಲುಚೀಲ, ಮಾಸ್ಕ್, ಸ್ಯಾನಿಟೈಸರ್ ಮುಂತಾದವುಗಳನ್ನು ನೀಡುತ್ತಿಲ್ಲ. ದಿನ ನಿತ್ಯ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗುವಂತಹ ಪರಿಸ್ಥಿತಿ ಇದೆ. ಇದರ ಬಗ್ಗೆ ಹೆಚ್ಚಾಗಿ ಮಾತನಾಡಿದರೆ ಕೆಲಸದಿಂದ ತೆಗೆಯುವುದಾಗಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾರ್ಮಿಕರು ಹೆಸರನ್ನು ಹೇಳದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ಕಷ್ಟಕ್ಕೆ ತಕ್ಕಂತೆ ವೇತನವಿಲ್ಲ :

ಪೌರಕಾರ್ಮಿಕರು ಬೆಳ್ಳಿಗ್ಗೆ ೫ ರಿಂದ ರಾತ್ರಿ ತನಕ ದುಡಿದರೂ ದುಡಿಮೆಗೆ ತಕ್ಕಂತೆ ವೇತನ ನೀಡುತ್ತಿಲ್ಲ. ಖಾಯಂ ನೌಕರರನ್ನು ಇತರೆ ಕೆಲಸಗಳಿಗೆ ನಿಯೋಜನೆ ಮಾಡುತ್ತಿರುವುದರಿಂದ ಇರುವ ನೌಕರರನ್ನೇ ಬಳಸಿಕೊಂಡು ಕೆಲಸ ಮಾಡಿಸುತ್ತಿದ್ದಾರೆ. ಸರ್ಕಾರಿ ರಜೆ ದಿನವೂ ಬೆಳ್ಳಿಗ್ಗಿನಿಂದ ಸಂಜೆಯ ತನಕ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕ ಕಾಯ್ದೆಗಳನ್ನು ಗಾಳಿಗೆ ತೂರಿದ್ದಾರೆ. ನಾಲ್ಕು ಜನ ಮಾಡುವ ಕೆಲಸವನ್ನು ಒಬ್ಬರ ಕೈಯಲ್ಲೇ ಮಾಡಿಸುತ್ತಿದ್ದಾರೆ. ಬೆಳ್ಳಿಗ್ಗೆ ಮಾತ್ರ ಉಪಹಾರ ನೀಡುತ್ತಾರೆ. ಮಧ್ಯಾಹ್ನ ಊಟವಿಲ್ಲ. ಬೆಳ್ಳಿಗ್ಗಿನಿಂದ ಮಧ್ಯಾಹ್ನದ ತನಕ ಮಾತ್ರ ಕೆಲಸ ಮಾಡಲು ಸರ್ಕಾರದ ಆದೇಶ ಇರುವುದು. ಆದರೂ ರಾತ್ರಿ ತನಕ ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ತಮ್ಮ ವೇದನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೋಟ್

ಪೌರಕಾರ್ಮಿಕರ ಸಂಖ್ಯೆ ನಗರದ ಜನಸಂಖ್ಯೆಗೆ ಅನುಗುಣವಾಗಿ ಕಡಿಮೆ ಇದೆ. ನಮ್ಮಲ್ಲಿ ಇರುವುದೇ ೨೧೪ ಪೌರಕಾರ್ಮಿಕರು ಅವರಲ್ಲಿಯೇ ಚಾಲಕರನ್ನು ಮತ್ತು ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಸದ್ಯಕ್ಕೆ ಇರುವ ಕಾರ್ಮಿಕರು ೮ ಗಂಟೆಗಳ ಕಾಲ ಕೆಲಸ ಮಾಡಿದರೆ ಕೋಲಾರ ನಗರ ಸ್ವಚ್ಛ ಆಗುತ್ತದೆ. ಗುರುವಾರ ಮತ್ತು ಭಾನುವಾರ ೨ ದಿನಗಳ ಕಾಲ ಅರ್ಧ ದಿನ ರಜೆ ತೆಗೆದುಕೊಳ್ಳುತ್ತಾರೆ. ಸಾಂದರ್ಭಿಕ ರಜೆಯನ್ನು ಪಡೆಯಬಹುದು. ಹಬ್ಬ ಹರಿದಿನ ಮತ್ತು ರಜೆ ದಿನಗಳಲ್ಲಿ ಕೆಲಸ ಮಾಡುವುದು ಸೇರಿ ವರ್ಷಕ್ಕೆ ೨೧ ದಿನಗಳ ವಿಶೇಷ ಭ್ಯತ್ಯೆಯನ್ನು ನೀಡಲಾಗುತ್ತಿದೆ. ಬೆಳ್ಳಗ್ಗೆ ೬ ಗಂಟೆಗೆ ಬಂದು ೧೦ ಗಂಟೆಗೆ ಕೆಲಸ ಬಿಡುತ್ತಾರೆ. ಸಂಜೆ ಮತ್ತೆ ಬರುತ್ತಾರೆ. ಕೆಲವರು ಅಧಿಕಾರಿಗಳ ಕಣ್ಣಿಗೆ ಕಾಣಿಸುವುದೇ ಇಲ್ಲ. ಕಾರ್ಮಿಕರಿಗೆ ಸ್ವಚ್ಛತಾ ಪರಿಕರಿಗಳನ್ನು ನೀಡುತ್ತಿದ್ದೇವೆ. ಸ್ವಲ್ಪ ಬಿಗಿ ಮಾಡಿದರೆ ಆರೋಪಗಳನ್ನು ಮಾಡುತ್ತಾರೆ.

-ನವೀನ್‌ಚಂದ್ರ, ಪೌರಾಯುಕ್ತರು, ಕೋಲಾರ.

ಕೋಟ್

ನಗರದಲ್ಲಿ ಎಸೆದಿರುವ ಒಣ ಕಸ ಮತ್ತು ಹಸಿ ಕಸ ವಿಂಗಡಣೆ ಮಾಡುವ ಸಂದರ್ಭದಲ್ಲಿ ಕಸ ಕೊಳೆತು ವಾಸನೆ ಬರುತ್ತಿದ್ದರೂ ವಿಂಗಡಣೆ ಮಾಡಬೇಕು. ಕೆಂದಟ್ಟಿ ಬಳಿ ಕಸ ವಿಲೇವಾರಿ ಘಟಕದ ಬಳಿ ಕಸ ವಿಂಗಡಣೆ ಮಾಡುವ ಸಂದರ್ಭದಲ್ಲಿ ಕೈಗೆ ಬಲವಾದ ಗಾಯವಾಗಿದೆ. ಇದುವರೆವಿಗೂ ನನ್ನ ಆರೋಗ್ಯವನ್ನು ವಿಚಾರಣೆ ಮಾಡಿಲ್ಲ. ನಗರಸಭೆಯಿಂದ ಯಾವುದೇ ಪರಿಹಾರ ನೀಡಿಲ್ಲ. ಕಾರ್ಮಿಕರು ಕಡಿಮೆ ಇದ್ದರು ಎಲ್ಲಾ ಕೆಲಸಗಳನ್ನು ನಮ್ಮಿಂದಲೇ ಮಾಡಿಸಿಕೊಳ್ಳುತ್ತಿದ್ದಾರೆ.

-ಪೌರಕಾರ್ಮಿಕ ಗಾಂಧಿನಗರದ ರಮೇಶ್

ಚಿತ್ರ ೨೦ ಕೆ.ಎಲ್.ಆರ್. ೦೪ : ಕೋಲಾರ ನಗರಸಭೆ ಚಿತ್ರ

ಚಿತ್ರ ೨೦ ಕೆ.ಎಲ್.ಆರ್. ೦೪ಎ : ಪೌರಕಾರ್ಮಿಕ ಗಾಂಧಿನಗರ ರಮೇಶ್ ಭಾವಚಿತ್ರ

ಚಿತ್ರ ೨೦ ಕೆ.ಎಲ್.ಆರ್. ೦೪ಬಿ : ಕಸದ ರಾಶಿಯಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡೆ ಮಾಡುತ್ತಿರುವ ಪೌರಕಾರ್ಮಿಕ