ನ್ಯೂಸ್

ನಗರಸಭೆ ಆವರಣದಲ್ಲಿ ಪ್ರತಿಭಟನೆ

ಹುಣಸೂರು: ನಗರಸಭೆ ವ್ಯಾಪ್ತಿಯ 11 ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಹರಾಜು ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ನಗರಸಭಾ ಅಧ್ಯಕ್ಷರ ನೇತೃತ್ವದಲ್ಲಿ ಕೆಲ ಸದಸ್ಯರು ಬುಧವಾರ ನಗರಸಭೆ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.


ಅಲ್ಲದೆ, ಬೆಳಗಾವಿ ಅಧಿವೇಶನ ವೀಕ್ಷಣೆಗೆ ತೆರಳಿರುವ ಕೆಲ ಸದಸ್ಯರು ಪ್ರತಿಭಟನೆ ಜನವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಅಲ್ಲಿಂದಲೇ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಹುಣಸೂರು ನಗರಸಭೆ ಆವರಣ ಬಹಿರಂಗ ಹರಾಜು ಪ್ರಕ್ರಿಯೆ ನೆಪದಲ್ಲಿ ಹಲವಾರು ರಾಜಕೀಯ ನಾಟಕಗಳಿಗೆ ಸಾಕ್ಷಿಯಾಯಿತು. ಫೆಬ್ರವರಿಯಲ್ಲಿ ಹುಣಸೂರು ನಗರಸಭೆಯ 100ಕ್ಕೂ ಹೆಚ್ಚು ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ನಡೆದಿತ್ತು. ಈ ವೇಳೆ 11 ಮಳಿಗೆಗಳ ಹರಾಜು ಹಲವಾರು ಕಾರಣಗಳಿಂದ ನಡೆದಿರಲಿಲ್ಲ. ಈ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಗರಸಭೆ ಅಧಿಕಾರಿಗಳು ಬುಧವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದರು.


ಸಭಾಂಗಣದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಕಚೇರಿ ಹೊರಗೆ ಮುಖ್ಯ ದ್ವಾರದ ಬಳಿ ಕೆಲ ಸದಸ್ಯರು, ಪೌರಾಯುಕ್ತರು ಸಾರ್ವಜನಿಕರಿಗೆ ಮತ್ತು ಸದಸ್ಯರಿಗೆ ಬಹಿರಂಗ ಹರಾಜು ಕುರಿತು ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಹರಾಜು ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ದಿಢೀರ್ ಪ್ರತಿಭಟನೆಗೆ ಕುಳಿತರು.


ಈ ವೇಳೆ ಮಾತನಾಡಿದ ಅಧ್ಯಕ್ಷೆ ಗೀತಾ ನಿಂಗರಾಜು, ಸದಸ್ಯರಾದ ವಿವೇಕಾನಂದ, ಮಾಲಿಕ್ ಪಾಷಾ, ಯೂನೂಸ್ ಖಾನ್, ಜಬೀವುಲ್ಲಾ ಖಾನ್(ಆಂಡಿ) ಇತರರು, 7 ದಿನಗಳು ಮುಂಚಿತವಾಗಿ ಸದಸ್ಯರಿಗೆ ಹರಾಜಿನ ಕುರಿತು ಮಾಹಿತಿ ಒದಗಿಸಬೇಕಿತ್ತು. ಆದರೆ, ನಿನ್ನೆ ನೋಟಿಸ್ ಬೋರ್ಡ್‌ನಲ್ಲಿ ಪತ್ರಿಕೆ ಜಾಹೀರಾತು ಪ್ರದರ್ಶಿಸಿದ್ದಾರೆ. ಸದಸ್ಯರಿಗೆ ಬೆಳಗ್ಗೆ ನೋಟಿಸ್ ಮೂಲಕ ಮಾಹಿತಿ ನೀಡಿದ್ದಾರೆ. ಹರಾಜು ಪ್ರಕ್ರಿಯೆ ಕುರಿತು ಹಾಲಿ ಮಳಿಗೆಯಲ್ಲಿರುವ ಬಾಡಿಗೆದಾರರಿಗೆ ತಿಳಿದಿಲ್ಲ. ಸಾರ್ವಜನಿಕರ ಗಮನಕ್ಕಾಗಿ ಆಟೋ ಧ್ವನಿವರ್ಧಕದ ಮೂಲಕ ಪ್ರಚಾರವನ್ನೂ ಕೈಗೊಂಡಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಡೀಲ್ ನಡೆದಿದ್ದು, ನಗರಸಭೆ ಆದಾಯಕ್ಕೆ ಖೋತಾ ಆಗಲಿದೆ. ಹಾಗಾಗಿ ಕೂಡಲೇ ಹರಾಜು ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.


ನಿಯಮ ಉಲ್ಲಂಘಿಸಿಲ್ಲ: ಪೌರಾಯುಕ್ತೆ ಎಂ.ಮಾನಸಾ ಮಾತನಾಡಿ, ನ.23ರಂದು ಬಹಿರಂಗ ಹರಾಜು ಕುರಿತಂತೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮಾಹಿತಿ ನೀಡಿ ಅವರಿಂದ ಒಪ್ಪಿಗೆಯ ಸಹಿ ಪಡೆದಿದ್ದೇನೆ. ಅದರಂತೆ ಪತ್ರಿಕೆಯಲ್ಲಿ ಜಾಹೀರಾತು ಕೂಡ ಪ್ರಕಟಿಸಲಾಗಿದೆ. ಕರಪತ್ರ ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗಿದೆ. ಹರಾಜು ಕುರಿತಂತೆ ನಗರಸಭೆ ಕೌನ್ಸಿಲ್ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದು, ತಿರಸ್ಕರಿಸುವ ಅವಕಾಶ ಅವರಿಗಿದೆ. ಆದರೆ, ನಿರ್ಧಾರಿತ ದಿನಾಂಕವನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಹರಾಜು ಪ್ರಕ್ರಿಯೆ ನಡಸಿದ್ದೇನೆ ಎಂದು ಸಮಜಾಯಿಸಿ ನೀಡಿದರು.

ರಾಜೀನಾಮೆ ನೀಡಲಿ: ಬೆಳಗಾವಿಯಲ್ಲಿ ಅಧಿವೇಶನ ವೀಕ್ಷಿಸಲು ತೆರಳಿರುವ ಕೆಲ ಕಾಂಗ್ರೆಸ್ ಸದಸ್ಯರು ನಗರಸಭೆಯಲ್ಲಿ ನಡೆದಿರುವ ಪ್ರತಿಭಟನೆ ಕುರಿತಂತೆ ಮಾಹಿತಿ ಪಡೆದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ತಿಂಗಳ ಹಿಂದೆ ಹರಾಜು ಪ್ರಕ್ರಿಯೆಗೆ ಒಪ್ಪಿಗೆ ನೀಡಿ ಸ್ವತಃ ಅವರು ಸಹಿ ಹಾಕಿದ್ದು ಇದೀಗ ಅವರು ಹರಾಜು ರದ್ದತಿಗಾಗಿ ಪ್ರತಿಭಟನೆಗೆ ಕುಳಿತಿರುವುದು ಯಾವ ನ್ಯಾಯ? ಡಿ.5ರಂದು ಪಕ್ಷದ ಒಳಒಪ್ಪಂದದಂತೆ ಹಾಲಿ ಅಧ್ಯಕ್ಷೆ ಗೀತಾ ನಿಂಗರಾಜು ರಾಜೀನಾಮೆ ಸಲ್ಲಿಸಬೇಕಿತ್ತು. ಹಲವಾರು ರಾಜಕೀಯ ಷಡ್ಯಂತ್ರವನ್ನು ನಡೆಸುತ್ತಾ, ಅಲ್ಪಸಂಖ್ಯಾತ ವ್ಯಕ್ತಿ ಮುಂದಿನ ನಗರಸಭೆ ಅಧ್ಯಕ್ಷರಾಗುವುದನ್ನು ತಪ್ಪಿಸಲು ಮತ್ತು ಶಾಸಕ ಎಚ್.ಪಿ.ಮಂಜುನಾಥ್‌ರ ಹೆಸರಿಗೆ ಕಳಂಕತರಲು ಹಾಲಿ ಅಧ್ಯಕ್ಷೆ ಪ್ರಯತ್ನಿಸುತ್ತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಖಂಡನೀಯ ಎಂದು ಸದಸ್ಯರಾದ ಸ್ವಾಮಿಗೌಡ, ರಮೇಶ್, ದೇವನಾಯಕ, ಸಮೀನಾ ಪರ್ವೀನ್, ಭವ್ಯಾ ಚಂದ್ರಶೇಖರ್, ಅನುಷಾ ರಾಘು, ರಂಜಿತಾ ಹರೀಶ್ ಇತರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.