ಬೆಂಗಳೂರು : ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 3.56 ಲಕ್ಷ ದಾಟಿದ್ದರೂ, ಸಕ್ರಿಯ ಕಂಟೇನ್ಮೆಂಟ್ ವಲಯಗಳ ಸಂಖ್ಯೆ ಕೇವಲ 2ಕ್ಕೆ ಇಳಿಕೆಯಾಗಿದೆ. ಇದರಿಂದ ವ್ಯಾಪಾರ ವಹಿವಾಟು, ಜನಸಂಚಾರ ಸೇರಿ ಎಲ್ಲ ಕಾರ್ಯಕ್ಕೂ ಮುಕ್ತ ಅವಕಾಶ ಲಭ್ಯವಾದಂತಾಗಿದೆ.
ಜುಲೈ ಮತ್ತು ಆಗಸ್ಟ್‌ನಲ್ಲಿ ಕರೊನಾ ಹರಡುವಿಕೆ ಪ್ರಮಾಣ ಉತ್ತುಂಗದಲ್ಲಿತ್ತು. ಆಗ ಸೋಂಕಿತರು ಪತ್ತೆಯಾದ ಪ್ರತಿ ಮನೆಯನ್ನೂ ಕಂಟೇನ್ಮೆಂಟ್ ಪ್ರದೇಶ ಎಂದು ಗುರುತಿಸಿ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಜನಸಂಚಾರ ನಿರ್ಬಂಧಿಸಲಾಗುತ್ತಿತ್ತು. ಆಗ (ಆ.20ಕ್ಕಿಂತ ಮುಂಚೆ) ಬಿಬಿಎಂಪಿ ವ್ಯಾಪ್ತಿಯಲ್ಲಿ 36 ಸಾವಿರಕ್ಕೂ ಅಧಿಕ ಕಂಟೇನ್ಮೆಂಟ್ ಪ್ರದೇಶಗಳಿದ್ದವು. ಪ್ರತಿ ವಾರ್ಡ್‌ಗಳಲ್ಲೂ 3ರಿಂದ 5 ರಸ್ತೆಗಳನ್ನು ಬಂದ್ ಮಾಡಿರುವ ದೃಶ್ಯಗಳು ಸಾಮಾನ್ಯವಾಗಿದ್ದವು. ಮಾರ್ಗಸೂಚಿ ಬದಲಾವಣೆಯಿಂದಾಗಿ ಕಂಟೇನ್ಮೆಂಟ್ ಪ್ರದೇಶಗಳ ಸಂಖ್ಯೆ ಕೇವಲ 2ಕ್ಕೆ ಇಳಿಕೆಯಾಗಿದೆ. ಇವೆರಡೂ ಮಹದೇವಪುರ ವಲಯದಲ್ಲಿವೆ.
ಮಹದೇವಪುರದಲ್ಲಿ 2 ಸಕ್ರಿಯ ಕಂಟೇನ್ಮೆಂಟ್: ಆ.21ರಿಂದ ಈವರೆಗೆ ಕೇವಲ 37 ಕಂಟೇನ್ಮೆಂಟ್ ಪ್ರದೇಶಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪಶ್ಚಿಮ ವಲಯದಲ್ಲಿ 9, ಮಹದೇವಪುರ 9, ಬೆಂಗಳೂರು ಪೂರ್ವ 5, ದಾಸರಹಳ್ಳಿ 7, ಯಲಹಂಕ 2, ಬೆಂಗಳೂರು ದಕ್ಷಿಣ 1, ಆರ್.ಆರ್. ನಗರ 1 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ ಇದ್ದ 1 ಕಂಟೇನ್ಮೆಂಟ್ ಪ್ರದೇಶಗಳನ್ನು ಸಾಮಾನ್ಯ ಪ್ರದೇಶಗಳಾಗಿ ಮಾರ್ಪಡಿಸಲಾಗಿದೆ. ಮಹದೇವಪುರದಲ್ಲಿನ 2 ಸಕ್ರಿಯ ಕಂಟೇನ್ಮೆಂಟ್ ಪ್ರದೇಶಗಳು ಉಳಿದುಕೊಂಡಿವೆ.
ಆರ್ಥಿಕ ಚೇತರಿಕೆ: ಕರೊನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್, ಕಂಟೇನ್ಮೆಂಟ್ ಜೋನ್, ಕ್ವಾರಂಟೈನ್, ಹೋಂ ಐಸೋಲೇಷನ್, ಕೋವಿಡ್ ಕೇರ್ ಸೆಂಟರ್ ಇತ್ಯಾದಿ ಹೊಸ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಪ್ರಸ್ತುತ, ಸೋಂಕಿತರ ಖಚಿತ ಪ್ರಮಾಣ ಶೇ.3ಕ್ಕಿಂತ ಕಡಿಮೆಯಾಗಿದೆ. ಪರಿಣಾಮ, ಎಲ್ಲೆಡೆ ಕೋವಿಡ್ ನಿಯಮಾವಳಿ ಪಾಲನೆಯೊಂದಿಗೆ ವ್ಯಾಪಾರ ವಹಿವಾಟು ನಡೆದಿದೆ. ಜನಸಂಚಾರವೂ ಹಳೇ ಲಯಕ್ಕೆ ಮರಳಿದ್ದರಿಂದ ಆರ್ಥಿಕ ಚೇತರಿಕೆ ಕಾಣಿಸಿಕೊಳ್ಳುತ್ತಿದೆ.
ಈಗಿನ ಕಂಟೇನ್ಮೆಂಟ್ ಮಾರ್ಗಸೂಚಿಗಳೇನು?
100 ಮೀಟರ್ ವ್ಯಾಪ್ತಿಯಲ್ಲಿ 20ಕ್ಕಿಂತ ಅಧಿಕ ಕರೊನಾ ಸೋಂಕಿತ ಪ್ರಕರಣಗಳು ಕಂಡುಬಂದಲ್ಲಿ ಮಾತ್ರ ಅದನ್ನು ಕಂಟೇನ್ಮೆಂಟ್ ಎಂದು ಪರಿಗಣಿಸಲಾಗುತ್ತಿದೆ. ಉಳಿದಂತೆ ಒಬ್ಬ ಅಥವಾ 20ಕ್ಕಿಂತ ಕಡಿಮೆ ಸೋಂಕಿತರು ಕಂಡುಬಂದಲ್ಲಿ ಆಯಾ ಮನೆಗೆ ಮಾತ್ರ ಚಿಕ್ಕ ಭಿತ್ತಿಪತ್ರ ಅಂಟಿಸಲಾಗುತ್ತಿದೆ. ಅಲ್ಲಿ ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಭೇಟಿ ಮಾಡಿ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲಾಗುತ್ತದೆ.