ವಿಜಯವಾಣಿ ಸುದ್ದಿಜಾಲ ಕೋಲಾರ
ಸ್ವಾತಂತ್ರ‍್ಯೋತ್ಸವದ ಅಂಗವಾಗಿ ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಯುವ ಮೋರ್ಚಾ ವತಿಯಿಂದ ಗುರುವಾರ ತಿರಂಗಾ ಯಾತ್ರೆ ಕೋಲಾರ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ನಾವು ದೇಶದಲ್ಲಿ ನೆಮ್ಮದಿಯಿಂದ ಇರಲು ಕಾರಣ ನಮ್ಮ ಸೈನಿಕರು, ನಾವು ದೇಶದ ಸ್ವಾತಂತ್ರ‍್ಯ ಹೋರಾಟಗಾರರು ಹಾಗೂ ಸೈನಿಕರಿಗೆ ಗೌರವ ನೀಡುತ್ತೇವೆ. ನಮ್ಮ ದೇಶದ ತಂಟೆಗೆ ಬಂದ್ರೆ ನಾವು ಬಿಡಲ್ಲಾ ಅಂತ ಮೋದಿ ಎಚ್ಚರಿಕೆ ನೀಡಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ ಮಾತನಾಡಿ, ಇಂದು ಯುವ ಮೋರ್ಚಾ ಅಧ್ಯಕ್ಷ ಅಭಿ ಭಾರದ್ವಾಜ್ ನಾಯ್ಡು ನೇತೃತ್ವದಲ್ಲಿ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದು, ಹಲವಾರು ಜನರು ಇದಕ್ಕೆ ಬೆಂಬಲ ನೀಡಿ, ಕೋಲಾರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಿದೆ. ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿ ಯವರು ಭಾರತ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ನಾವೆಲ್ಲರೂ ಪ್ರಧಾನಿ ಮೋದಿ ಬೆಂಬಲಕ್ಕೆ ನಿಲ್ಲಬೇಕು ಎಂದರು.
ತ್ರಿವರ್ಣ ಧ್ವಜ ನಮ್ಮ ದೇಶದ ಹೆಮ್ಮೆಯಾಗಿದ್ದು, ಇದು ಎಲ್ಲಾ ಭಾರತೀಯರನ್ನು ಒಂದುಗೂಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾದಿಯಾಗಿ ಪ್ರತಿಯೊಬ್ಬರ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವಂತಾಗಿದೆ. ದೇಶದ ಸೈನಿಕರು ಮತ್ತು ರೈತರು ತಮ್ಮ ತ್ಯಾಗ, ತಪಸ್ಸು ಮತ್ತು ಸಮರ್ಪಣೆಯ ಮೂಲಕ ಅಸಂಖ್ಯಾತ ಹೋರಾಟಗಾರರನ್ನು ನಾವು ನೆನೆಯುವ ಕೆಲಸ ಮಾಡಬೇಕು ಎಂದು ಅಭಿ ಭಾರದ್ವಾಜ್ ನಾಯ್ಡು ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ವೈ ಎನ್ ನಾರಾಯಣಸ್ವಾಮಿ, ಸಿಎಂಆರ್ ಶ್ರೀನಾಥ್, ಬಾಲಾಜಿ, ಸಾಮಬಾಬು, ಭೀಮರಾವ್, ತೇಜಸ್, ಹರೀಶ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೧೪ ಕೆ.ಎಲ್.ಆರ್. ೦೫ : ಕೋಲಾರ ನಗರದಲ್ಲಿ ಬಿಜೆಪಿ ಮತ್ತು ಯುವ ಮೋರ್ಚಾ ವತಿಯಿಂದ ತಿರಂಗಾ ಅಭಿಯಾನ ಯಾತ್ರೆ ಕೈಗೊಂಡಿರುವುದು. ಯಾತ್ರೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜಿಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮುಂತಾದವರು ಇದ್ದರು.