ನ್ಯೂಸ್

ನಗರದಲ್ಲಿ ಒಂದೇ ದಿನ 4,216 ಸೋಂಕಿತರು ಪತ್ತೆ: ಹೊಸ ದಾಖಲೆ

ಬೆಂಗಳೂರು : ರಾಜಧಾನಿಯಲ್ಲಿ ಭಾನುವಾರ 4,217 ಹೊಸ ಕರೊನಾ ಪ್ರಕರಣಗಳು ದೃಢಪಟ್ಟಿದ್ದು, ಈವರೆಗಿನ ಅತಿ ಹೆಚ್ಚು ಸೋಂಕಿತರು ಪತ್ತೆಯಾದ ಹೊಸ ದಾಖಲೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2,20,847ಕ್ಕೆ ಏರಿಕೆಯಾಗಿದೆ.

ನಗರದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ವರದಿಯಾದ 4,196 ಪ್ರಕರಣಗಳು ಒಂದು ದಿನ ಪತ್ತೆಯಾಗಿರುವುದೇ ಅತ್ಯಧಿಕ ದಾಖಲೆಯಾಗಿತ್ತು. ಆದರೆ, ಭಾನುವಾರ ಇದನ್ನೂ ಮೀರಿಸಿದೆ. ಗುಣಮುಖರ ಸಂಖ್ಯೆ ಕಡಿಮೆಯಿದ್ದು 3,306 ಮಂದಿ ಸೋಂಕು ಮುಕ್ತರಾಗಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 1,73,736ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಅಧಿಕವಾಗಿದ್ದು, 44,274 ಮಂದಿ ವಿವಿಧ ಆಸ್ಪತ್ರೆ, ಆರೈಕೆ ಕೇಂದ್ರ ಮತ್ತು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಪೈಕಿ 264 ಮಂದಿ ಗಂಭೀರ ಸ್ವರೂಪದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿಗೆ 15 ಬಲಿ: ಸೋಂಕಿತರ ಸಂಖ್ಯೆ ದಾಖಲೆ ಏರಿಕೆ ಮಟ್ಟದಲ್ಲಿ ಸಾಗುತ್ತಿದ್ದರೂ, ಸಾವಿನ ಪ್ರಮಾಣ ಇಳಿಮುಖ ಆಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಭಾನುವಾರ ಕೇವಲ 15 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2,836ಕ್ಕೆ ತಲುಪಿದೆ. ಇನ್ನು ಸೆ.1 ರಿಂದ ಸೆ.26ರವರೆಗೆ ಶೇ.14 ಪಾಸಿಟಿವಿಟಿ ದರದ ಆಧಾರದಲ್ಲಿ 85,789 ಮಂದಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.