ನ್ಯೂಸ್

ನಕ್ಷಾಯೋಜನೆ, ಕೆರೆ ಸರ್ವೇ, ಡಿಜಟಲೀಕರಣ ತ್ವರಿತಗೊಳಿಸಿ / ಮಂಜುನಾಥ್

ವಿಜಯವಾಣಿ ಸುದ್ದಿಜಾ ಕೋಲಾರ

ನಗರದ ಆಸ್ತಿಗಳಿಗೆ ದಾಖಲೆ ನೀಡುವ ನಕ್ಷಾ ಯೋಜನೆ, ಕೆರೆಗಳ ಸರ್ವೇ ಕಾರ್ಯ ದರ್ಖಾಸ್ತು ಪೋಡಿ ಕಾರ್ಯದ ವೇಗ ಹೆಚ್ಚಿಸಿ, ಆಕಾರಬಂಧು ಡಿಜಟಲೀಕರಣ ಮುಗಿಸಿ ಎಂದು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಭೂದಾಖಲೆಗಳ ಇಲಾಖೆ ರಾಜ್ಯ ಆಯುಕ್ತ ಮಂಜುನಾಥ್ ಸೂಚನೆ ನೀಡಿದರು.

ನಗರದ ಸರ್ವೇ ಇಲಾಖೆಯ ಕಚೇರಿಯಲ್ಲಿ ಸೋಮವಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ನಗರ ವ್ಯಾಪ್ತಿಯ ಮನೆ, ಅಂಗಡಿ ಮತ್ತಿತರ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ನೀಡುವ ಅತ್ಯಂತ ಉತ್ತಮವಾದ ನಕ್ಷಾ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ಕೋಲಾರ ನಗರವನ್ನು ಅತಿ ಬೇಗ ಈ ಯೋಜನೆಗೆ ಒಳಪಡಿಸಿ ಎಂದು ಸಲಹೆ ನೀಡಿದರು.

ನಕ್ಷಾ ಯೋಜನೆಯಿಂದಾಗಿ ನಗರದ ಮನೆ, ಅಂಗಡಿ ಮತ್ತಿತರ ಆಸ್ತಿಗಳ ದಾಖಲೆ ಪಡೆಯುವುದು ಸುಲಭವಾಗಲಿದೆ. ಜನಸಾಮಾನ್ಯರಿಗೆ ತಮ್ಮ ಆಸ್ತಿಯ ಪ್ರಾಪರ್ಟಿ ಕಾರ್ಡ್ ಕೈಗೆ ಸಿಗಲಿದೆ. ಯಾವುದೇ ನಕಲಿ ದಾಖಲೆ ಸೃಷ್ಟಿ, ಅಕ್ರಮ ತಿದ್ದುಪಡಿ ಮತ್ತಿತರ ಅನಾಹುತಗಳಿಗೆ ಅವಕಾಶ ಇರುವುದಿಲ್ಲ ಎಂದರು.

ಡಿಜಟಲೀಕರಣದಿAದ ಕೆಲಸದ ಒತ್ತಡವಿಲ್ಲ :

ನಕ್ಷಾ ಯೋಜನೆ, ಕೆರೆಗಳ ಸರ್ವೇ ಕಾರ್ಯ, ದರ್ಖಾಸ್ತು ಪೋಡಿ, ಆಕಾರ್‌ಬಂಧು ಡಿಜಟಲೀಕರಣ ಕಾರ್ಯಗಳು ಅತಿಬೇಗ ಮುಗಿಸಬೇಕು. ಸಾರ್ವಜನಿಕರಿಗೆ ಇದರ ಪ್ರಯೋಜನ ಸಿಗುವಂತಾಗಬೇಕು. ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಕೆಲಸದ ಒತ್ತಡವಿದ್ದರೂ ಈ ಕಾರ್ಯಗಳು ಸಹಾ ಅಷ್ಟೇ ಮುಖ್ಯವಾಗಿದ್ದು, ಬದ್ದತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ದರ್ಖಾಸ್ತು ಪೋಡಿ ಮಾಡಿ ಹೊಸ ಸರ್ವೇ ನಂಬರ್ ಪಹಣಿ ಮಾಡಲು ಸೂಚನೆ ನೀಡಿ, ಆಕಾರಬಂಧು ಡಿಜಟಲೀಕರಣ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಆಗುವುದರಿಂದ ಕೆಲಸ ತ್ವರಿತಗತಿಯಿಂದ ಆಗುತ್ತದೆ. ಆನ್‌ಲೈನ್‌ನಲ್ಲೇ ಪ್ರಿಂಟ್ ಪ್ರತಿ ಸಿಗುತ್ತದೆ ಮತ್ತು ದಾಖಲೆ ನಾಶ, ನಕಲಿ ದಾಖಲೆ ತಯಾರಿಕೆಯ ಆತಂಕ ತಪ್ಪಲಿದೆ ಎಂದರು.

ರೈತರು ತಮ್ಮ ಆಸ್ತಿಯ ದಾಖಲೆಗೆ ಅಲೆದಾಟ ತಪ್ಪಿಸುವುದೇ ಕಂದಾಯ ಸಚಿವರ ಉದ್ದೇಶವಾಗಿದೆ. ಡಿಜಟಲೀಕರಣ ಕಾರ್ಯ ಅತಿಶೀಘ್ರ ಮುಗಿಸಲು ಸಚಿವರು ಈಗಾಗಲೇ ಕಟ್ಟಪ್ಪಣೆ ಮಾಡಿದ್ದು, ಇಲಾಖೆ ಅಧಿಕಾರಿಗಳು ಎಚ್ಚರದಿಂದ ಕೆಲಸ ಮುಗಿಸಿ ಎಂದರು.

ಕೆರೆಗಳ ಸಂರಕ್ಷಣೆ ಜವಾಬ್ದಾರಿ ಕೆಲಸ :

ಕೆರೆಗಳ ಒತ್ತುವರಿ ತೆರವುಗೊಳಿಸಲು ಸರ್ವೇ ಕಾರ್ಯ ಅತಿ ಮುಖ್ಯವಾಗಿದ್ದು, ಈ ಕಾರ್ಯ ವಿಳಂಬವಾಗಬಾರದು. ಅಳತೆ ಕಾರ್ಯ ತ್ವರಿತ ಗತಿಯಲ್ಲಿ ನಡೆಸಲು ಕ್ರಮವಹಿಸಿ ಎಂದು ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.

ಪರಿಸರ ಸಂರಕ್ಷಣೆ, ಅಂತರ್ಜಲ ವೃದ್ದಿಗೆ ಕೆರೆಗಳ ಮಹತ್ವ ಹೆಚ್ಚಿದೆ, ಈ ಕೆರೆಗಳನ್ನು ಕೆಲವರು ಭೂದಾಹದಿಂದ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ತೆರವುಗೊಳಿಸಿ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆಗೆ ಕೆರೆ ಉಳಿಸಲು ಶ್ರಮಿಸೋಣ ಎಂದರು.

ನಕ್ಷಾ ಯೋಜನೆಯ ನಗರ ಆಸ್ತಿ ದಾಖಲೆ ನಿರ್ವಹಣೆ ಯೋಜನೆ ಉಸ್ತುವಾರಿ ಅಧಿಕಾರಿ ಹಾಗೂ ಜಂಟಿ ನಿರ್ದೇಶಕ ಗೋಪಾಲಯ್ಯ, ಡಿಡಿಎಲ್‌ಆರ್ ಸಂಜಯ್, ವಿವಿಧ ತಾಲ್ಲೂಕುಗಳ ಎಡಿಎಲ್‌ಆರ್‌ಗಳಾದ ಹನುಮಂತರಾಯಪ್ಪ, ಕೃಷ್ಣ, ರಾಮಕೃಷ್ಣಪ್ಪ, ಅಧೀಕ್ಷಕ ಅನಂತರಾಮು, ಸುಭಾಷ್, ಸಂದೀಪ್, ರವಿ, ಚಂದು, ಸಹನ, ವೆಂಕಿ, ಮಹೇಶ್, ರಾಮರೆಡ್ಡಿ,ಸುರೇಶ್, ಮಲ್ಲೇಶ್ ಮತ್ತಿತರರಿದ್ದರು.

ಚಿತ್ರ ೨೧ ಕೆ.ಎಲ್.ಆರ್. ೦೩ : ಕೋಲಾರದ ಸರ್ವೇ ಇಲಾಖೆಯಲ್ಲಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಪರಿಶೀಲನೆ ನಡೆಸಿದ ಭೂದಾಖಲೆಗಳ ಇಲಾಖೆ ರಾಜ್ಯ ಆಯುಕ್ತ ಮಂಜುನಾಥ್‌ರನ್ನು ಸರ್ವೇ ಇಲಾಖೆ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸನ್ಮಾನಿಸಲಾಯಿತು.