ನ್ಯೂಸ್

ನಂದಿನಿ ಉತ್ಪನ್ನಗಳು ನಕಲಿ ಆಗಲು ಸಾಧ್ಯವೇ ಇಲ್ಲ

ನಂದಿನಿ ಉತ್ಪನ್ನಗಳನ್ನು ಹೋಟೆಲ್ ಮಾಲೀಕರು ಬಳಸುವ ಮೂಲಕ ಹೈನೋದ್ಯಮವನ್ನು ಪ್ರೋತ್ಸಾಹಿಸಿ ಎಂದು ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಈರೇಗೌಡ ತಿಳಿಸಿದರು.

ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ ಡಾ.ವರ್ಗೀಸ್ ಕುರಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ಹೋಟೆಲ್ ಮಾಲೀಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಕಲಿ ಹಾಲು, ತುಪ್ಪ ಹಾಗೂ ಪನ್ನೀರಿನ ಬಳಕೆ ನಡೆಯುತ್ತಿದೆ. ಹೋಟೆಲ್ ಉದ್ಯಮದವರು ಉತ್ತಮ ಗುಣಮಟ್ಟದ ಹಾಲಿನ ಖರೀದಿಗೆ ಆದ್ಯತೆ ನೀಡಬೇಕಿದೆ. ನಮ್ಮದು ರೈತರಿಂದ ನೇರವಾಗಿ ವೈಜ್ಞಾನಿಕವಾಗಿ ಪರೀಕ್ಷಿಸಿ ಪಡೆದು ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಇಂದು ಹೊರ ರಾಜ್ಯದಿಂದ ಬರುತ್ತಿರುವ ಕೋವಾ, ಪನ್ನೀರ್, ಹಾಲು, ಮಜ್ಜಿಗೆ ನಕಲಿಗಳಾಗಿವೆ. ಆದರೆ, ನಂದಿನಿ ಉತ್ಪನ್ನಗಳು ನಕಲಿ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಹೀಗಾಗಿ ಹೋಟೆಲ್ ಉದ್ಯಮದವರು ಹೆಚ್ಚಾಗಿ ನಂದಿನಿ ಉತ್ಪನ್ನ ಬಳಸಿ, ರೈತರನ್ನು ಬೆಳೆಸಬೇಕಿದೆ. ಹೆಚ್ಚೆಚ್ಚು ನಂದಿನಿ ಉತ್ಪನ್ನಗಳನ್ನೇ ಬಳಸಿ, ನಂದಿನಿ ಉತ್ಪನ್ನ ಕೊಂಚ ದರ ಹೆಚ್ಚಿದ್ದರೂ ಗುಣಮಟ್ಟದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ನಂದಿನಿ ಬಳಸಿ. ಮಹಾರಾಜರ ಕಾಲದಿಂದಲೂ ತಿರುಪತಿಗೆ ಮೈಸೂರಿನಿಂದಲೇ ತುಪ್ಪ ಹೋಗುತ್ತಿದೆ. ಇಲ್ಲಿ ಪ್ರಕೃತಿ ದತ್ತವಾಗಿ ಗೋವಿನ ಸಾಕಣೆ ಆಗುವುದರಿಂದ ಇಲ್ಲಿನ ಉತ್ತಮ ತುಪ್ಪ, ಬೆಣ್ಣೆ, ಪನ್ನೀರ್ ಸಿಗಲಿದೆ ಎಂದು ಹೇಳಿದರು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ನಂದಿನಿ ಉತ್ಪನ್ನಗಳು ಶ್ರೇಷ್ಠವಾಗಿದ್ದು, ಬೇರೆ ಒಕ್ಕೂಟಗಳಿಗೆ ಹೊಲಿಕೆ ಮಾಡಿದರೂ ಮೈಸೂರಿನ ನಂದಿನಿ ಹಾಲಿನ ಒಕ್ಕೂಟದ ಪರಿಶುದ್ಧವಾದ ಉತ್ಪನ್ನ ಸಿಗಲಿದೆ. ಈಗಾಗಲೇ ಅನೇಕ ಹೋಟೆಲ್‌ಗಳಲ್ಲಿ ನಂದಿನಿ ಹಾಲಿನ ಉತ್ಪನ್ನ ಬಳಸಲಾಗುತ್ತಿದೆ. ಸತ್ಯ, ಸ್ವಚ್ಛತೆ, ಶುದ್ಧ ಉದ್ಯಮ ಆಗಿರುವುದರಿಂದ ನಾವು ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ನಂದಿನಿ ಉತ್ಪನ್ನಗಳನ್ನೇ ಹೆಚ್ಚಾಗಿ ಬಳಸುತ್ತಿದ್ದೇವೆ. ಮತ್ತಷ್ಟು ಜನರೂ ಬಳಸಬೇಕೆಂದು ಹೇಳಿದರು.

ಮೈಮುಲ್ ನಿರ್ದೇಶಕ ಓಂಪ್ರಕಾಶ್ ಮಾತನಾಡಿ, ಸಹಕಾರ ತತ್ವದಡಿಯಲ್ಲಿ ನಂದಿನಿ ನಡೆಯುತ್ತಿದ್ದು, 500ಎಂಎಲ್ ನಿಂದ 500 ಲೀಟರ್‌ವರೆಗೂ ಹಾಲು ನೀಡುವವರು ನಮ್ಮ ಸೊಸೈಟಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಚ್‌ಎಫ್ ಹಸುಗಳ ವ್ಯಾಮೋಹದಿಂದ ಹೈನೋದ್ಯಮ ಹೇರಳವಾಗಿ ಬೆಳೆಯುತ್ತಿದೆ. ಹೀಗಾಗಿ ಪ್ರತಿಯೊಬ್ಬರು ರೈತ ಸಂಸ್ಥೆಗಳನ್ನು ಬೆಳೆಸಲು ಪ್ರೋತ್ಸಾಹಿಸಿ ಎಂದು ಕೋರಿದರು.

ಇದೇ ವೇಳೆ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್‌ನಾಯ್ಕ ಮಾತನಾಡಿ, ಇತರೆ ಉತ್ಪನ್ನಗಳಿಗೆ ಹೊಲಿಕೆ ಮಾಡಿದರೆ ನಮ್ಮ ಉತ್ಪನ್ನ ಗುಣಮಟ್ಟದಿಂದ ಕೂಡಿದೆ. ಪನ್ನೀರು, ಬೆಣ್ಣೆ, ಹಾಲು, ತುಪ್ಪ ಮೊದಲಾದ ಉತ್ಪನ್ನಗಳನ್ನು ನಿಮಗೆ ಬೇಡಿಕೆ ಅನುಗುಣವಾಗಿ ಸರಬರಾಜು ಮಾಡಲು ಸಿದ್ಧರಿದ್ದೇವೆ. ಮಾತ್ರವಲ್ಲದೆ, ಮೈಮುಲ್ ಸದಾ ಹೋಟೆಲ್ ಉದ್ಯಮಿಗಳ ಸಲಹೆ, ಸಹಕಾರಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತೇವೆ ಎಂದರು.

ಹೋಟೆಲ್ ಮಾಲೀಕರ ಸಂಘದ ಸತೀಶ್, ರವಿಶಾಸ್ತ್ರೀ, ಗೋವಿಂದೇಗೌಡ, ಮೈಮುಲ್ ನಿರ್ದೇಶಕ ಸದಾನಂದ ಮಾತನಾಡಿದರು. ನಿರ್ದೆಶಕರಾದ ಎ.ಟಿ.ಸೋಮಶೇಖರ, ಕೆ.ಜಿ.ಮಹೇಶ್, ಕೆ.ಉಮಾಶಂಕರ್, ಸಿ.ಓಂಪ್ರಕಾಶ್, ಪಿ.ಎಂ.ಪ್ರಸನ್ನ, ಆರ್.ಚೆಲುವರಾಜು, ಕೆ.ಎಸ್.ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜು, ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಬಿ.ಎನ್.ಸದಾನಂದ, ಬಿ.ಗುರುಸ್ವಾಮಿ, ಬಿ.ಎ.ಪ್ರಕಾಶ್, ಎ.ಬಿ.ಮಲ್ಲಿಕಾ ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಉಪಸ್ಥಿತರಿದ್ದರು.