ನ್ಯೂಸ್

ನಂದಿಗಿರಿಧಾಮದಲ್ಲಿ ಜೂ.೨ ರಂದು ನಡೆಯುವ ಸಚಿವಸಂಪುಟದಲ್ಲಿ ಎತ್ತಿನಹೊಳೆ ಯೋಜನೆಯ ನೀರಿನ ಲಭ್ಯತೆ ಇಳುವರಿ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಬೇಕಾಗಿದೆ / ಆಂಜನೇಯರೆಡ್ಡಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ಎತ್ತಿನಹೊಳೆ ಯೋಜನೆ ನೀರು ಹರಿಸುವುದು ಅಸಾಧ್ಯವಾಗಿದೆ. ನೀರಿನ ಲಭ್ಯತೆ ಇಳುವರಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆಯಾಗಬೇಕಾದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ವತಿಯಿಂದ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎತ್ತಿನಹೊಳೆ ಯೋಜನೆಯ ಕಟ್ಟಕಡೆಯ ಫಲಾನುಭವಿ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವುದು ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯ ಎನಿಸುವಂತಾಗಿದೆ. ಈ ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ಸರ್ಕಾರಗಳು, ರಾಜಕೀಯ ನಾಯಕರು, ಚುನಾಯಿತ ಪ್ರತಿನಿಧಿಗಳು ನೀರಾವರಿ ತಲುಪಿಸುವ ವಿಚಾರವನ್ನು ಪರಿಗಣಿಸುತ್ತಿಲ್ಲ ಎಂದು ದೂರಿದರು.

ಜೂ.೨ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಇದಕ್ಕೂ ಮುನ್ನ ಜು.೧೯ ರಂದು ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗಧಿಯಾಗಿತ್ತು. ಆ ಸಭೆಯನ್ನು ಜೂ.೨ಕ್ಕೆ ಮುಂದೂಡಿದ ನಂತರ ಮುಖ್ಯಮಂತ್ರಿಗಳು ಎತ್ತಿನಹೊಳೆ ಕಾಮಗಾರಿಗಳನ್ನು ಪರಿಶೀಲಿಸಿದರು. ಉಪ ಮುಖ್ಯಮಂತ್ರಿ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದಲ್ಲಿ ಯೋಜನೆಯನ್ನು ಪರಿಶೀಲಿಸಿದರು. ಈ ಹಿಂದಿನಿAದಲೂ ಪರಿಶೀಲೆನೆಗಳು ನಡೆಯುತ್ತಿವೆ. ಕಾಮಗಾರಿಗಳಿಗೆ ಎಷ್ಟು ಖರ್ಚಾಗಿದೆ ಎನ್ನುವ ಲೆಕ್ಕಾಚಾರ ನಮಗೆ ಬೇಡ. ನೀರು ಕೊಡುತ್ತೇವೆಂದು ಹೇಳಿದ ಸರ್ಕಾರಗಳು ಏಕೆ ಇಷ್ಟು ವರ್ಷವಾದರೂ ನೀರು ಕೊಟ್ಟಿಲ್ಲ ಎನ್ನುವುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಮಗಾರಿಗಳು ಪ್ರಾರಂಭಗೊAಡು ೧೨ ವರ್ಷಗಳಾಗಿದ್ದು, ಸಾವಿರಾರು ಕೋಟಿ ಖರ್ಚುಮಾಡಲಾಗಿದೆ. ೨೦೨೪ರ ವಿಧಾನಸಭೆ ಅಧಿವೇಷಣದಲ್ಲಿ ಎತ್ತಿನಹೊಳೆ ಯೋಜನೆಯ ನೀರಿನ ಲಭ್ಯತೆ ೮ ಟಿ.ಎಂ.ಸಿ. ಅಡಿಗೆ ಇಳಿದಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ. ಆದ್ದರಿಂದ ಸಚಿವಸಂಪುಟದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ತಿಳಿಸಿದ್ದಾರೆ.

ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ನೀರಾವತಿ ಯೋಜನೆಯಲ್ಲಿ ೩ ಹಂತಗಳ ಶುದ್ಧೀಕರಣ ಬೇಡ ಎನ್ನುತ್ತಿದ್ದವರು ಈಗ ೩ ಹಂತದ ಶುದ್ಧೀಕರಣ ಬೇಕು ಎನ್ನುತ್ತಿದ್ದಾರೆ. ನಾವು ಬಯಲುಸೀಮೆ ನೀರಾವರಿ ವಿಚಾರಗಳನ್ನು ಭಾವನಾತ್ಮಕವಾಗಿ ಹೇಳುತ್ತಿಲ್ಲ. ವೈಜ್ಞಾನಿಕ ಮಾಹಿತಿ ಅಧ್ಯಯನದ ವರದಿಗಳನ್ನು ಆಧರಿಸಿ ಮಾತನಾಡುತ್ತಿದ್ದೇವೆ ಎಂದರು.

ಕೆರೆಗಳಿಗೆ ನೀರು ಹರಿಯುವ ರಾಜಕಾಲುವೆಗಳನ್ನು ಪುನರ್‌ಚ್ಛೇರನಗೊಳಿಸಬೇಕು. ಸರ್ಕಾರಕ್ಕೆ ಕಾಳಜಿ ಇದ್ದರೆ ಈ ಎರಡೂ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ಹರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೀರಾವರಿ ಹೋರಾಟ ಸಮಿತಿಯ ಸದಸ್ಯರಾದ ಹೊಳಲಿ ಪ್ರಕಾಶ್, ಅಬ್ಬಣಿ ಶಿವಪ್ಪ, ಕಲ್ವಮಂಜಲಿ ರಾಮಶಿವಣ್ಣ, ಚಂಬೇರಾಜೇಶ್, ವಿ.ಕೆ.ರಾಜೇಶ್, ಪುಟ್ಟರಾಜು, ದಲಿತ ನಾರಾಯಣಸ್ವಾಮಿ ಮುಂತಾದವರು ಇದ್ದರು.

ಚಿತ್ರ ೨೯ ಕೆ.ಎಲ್.ಆರ್. ೦೭ : ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಮಾತನಾಡಿದರು. ಹೊಳಲಿ ಪ್ರಕಾಶ್, ಅಬ್ಬಣಿ ಶಿವಪ್ಪ ಮುಂತಾದವರು ಇದ್ದರು.