ನಂಜನಗೂಡು: ವಿವಾಹ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯಕ್ಕೆ ಚಿತ್ರನಟ ಡಾಲಿ ಧನಂಜಯ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಚಿತ್ರನಟ ಧನಂಜಯ, ಶಾಸಕ ದರ್ಶನ್ ಧ್ರುವನಾರಾಯಣ ಒಟ್ಟಿಗೆ ದೇವಾಲಯಕ್ಕೆ ತೆರಳಿ ನಂಜುಂಡೇಶ್ವರನಿಗೆ ಲಗ್ನ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದರು. ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ನಾರಾಯಣಸ್ವಾಮಿ, ಸುಬ್ರಹ್ಮಣ್ಯ ದೇವರ ಪ್ರದರ್ಶನ ಹಾಕಿದರು.
ಬಳಿಕ ಮಾತನಾಡಿದ ಅವರು, ವಿವಾಹ ಸಮಾರಂಭದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದೇನೆ. ಶಾಸಕ ದರ್ಶನ್ ಧ್ರುವನಾರಾಯಣ ಅವರನ್ನು ಆಹ್ವಾನಿಸಿ ಮದುವೆಗೆ ಆಮಂತ್ರಣ ಪತ್ರಿಕೆ ನೀಡಿದ್ದೇನೆ. ಇದೇ ತಿಂಗಳು ನಡೆಯುವ ಸುತ್ತೂರು ಜಾತ್ರೆಗೆ ಆಗಮಿಸುತ್ತೇನೆ. ಸುತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದೇನೆ ಎಂದರು.
ನಟ ಡಾಲಿ ಧನಂಜಯ ನೋಡಲು ನೂರಾರು ಅಭಿಮಾನಿಗಳು ದೇವಾಲಯದಲ್ಲಿ ನೆರೆದಿದ್ದರು. ನಟನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸಿಎಂ ಶಂಕರ್, ರಾಜೇಶ್ ಹಾಜರಿದ್ದರು.