ನ್ಯೂಸ್

ನಂಜನಗೂಡಿನಲ್ಲಿ ಮತ್ತೆ ಕಮಲ ಅರಳಿಸುತ್ತೇವೆ

ನಂಜನಗೂಡು: ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲವರ್ಧನೆ ಮಾಡುವ ಮೂಲಕ ನಂಜನಗೂಡಿನಲ್ಲಿ ಮತ್ತೆ ಕಮಲ ಅರಳಿಸಲಿದ್ದೇವೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ ಹೇಳಿದರು.


ತಾಲೂಕಿನ ದೇಬೂರು ಗ್ರಾಮದಲ್ಲಿ ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಉನ್ನತಿಗಾಗಿ ಕಿಸಾನ್ ಸಮ್ಮಾನ್, ಫಸಲ್ ಬಿಮಾ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಜತೆಗೆ ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರ ಅವಿರತ ಶ್ರಮದ ಫಲವಾಗಿ ಈ ಭಾಗದ ಬಹುಕಾಲದ ಬೇಡಿಕೆಯಾಗಿದ್ದ ನುಗು ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಹೆಡಿಯಾಲ ಭಾಗದ ಕೆರೆ ತುಂಬಿಸುವ ಯೋಜನೆಗೂ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕ ಬಿ.ಹರ್ಷರ್ಧನ್ ಅವರನ್ನು ಆಯ್ಕೆ ಮಾಡುವ ಸಲುವಾಗಿ ಪ್ರತಿ ಮನೆಗೆ ಭೇಟಿ ನೀಡಿ ಈ ಎಲ್ಲ ಸಾಧನೆಗಳನ್ನು ಜನರಿಗೆ ತಿಳಿಸಿ ಬೂತ್ ಹಂತದಲ್ಲಿ ಪಕ್ಷವನ್ನು ಸದೃಢಗೊಳಿಸಲು ಮುಂದಾಗಿದ್ದೇವೆ ಎಂದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಮಾತನಾಡಿ, ಬೂತ್ ಹಂತದಲ್ಲಿ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಸಲುವಾಗಿ ಬೂತ್ ವಿಜಯ್ ಅಭಿಯಾನ ನಡೆಸಲಾಗುತ್ತಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 50 ಮನೆಗಳಿಗೆ ಪಕ್ಷದ ಬಾವುಟ ಕಟ್ಟುವುದು ಹಾಗೂ ಬೂತ್ ಸಮಿತಿ ರಚನೆಯಾಗಿರುವುದೇ ಎಂಬುದನ್ನು ಪರಿಶೀಲಿಸಿ ಪಕ್ಷವನ್ನು ಸದೃಢವಾಗಿ ಸಂಘಟಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.


ತಾಪಂ ಮಾಜಿ ಸದಸ್ಯ ಹೆಮ್ಮರಗಾಲ ಶಿವಣ್ಣ, ಹೆಡತಲೆ ಸಿದ್ದರಾಜು, ಶಿವಣ್ಣ, ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ, ನಾಗರಾಜು, ರವಿ, ಮಂಜು, ಶಿವನಂಜನಾಯಕ ಇದ್ದರು.