ನ್ಯೂಸ್

ನಂ.ಗೂಡಲ್ಲಿ ಎರಡು ಗ್ರಾಮಗಳು ಸೀಲ್‌ಡೌನ್


ವಿಜಯವಾಣಿ ಸುದ್ದಿಜಾಲ ನಂಜನಗೂಡು
ನಂಜನಗೂಡಿನಲ್ಲಿ ಬೆಂಬಿಡದೆ ಕಾಡಿದ್ದ ಕರೊನಾ ಸೋಂಕಿನ ಕರಿಛಾಯೆ ಮಾಸಿದ ಕೆಲವೇ ದಿನಗಳಲ್ಲಿ ಮಂಡ್ಯ ಮೂಲದ ಸೋಂಕಿತ ತಾಲೂಕಿನಲ್ಲಿ ಸಂಚರಿಸಿದ ಪರಿಣಾಮ 2 ಗ್ರಾಮಗಳನ್ನು ಸೀಲ್‌ಡೌನ್ ಮಾಡಿ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಮಳ್ಳವಳ್ಳಿಯ ಅಧಿಕಾರಿಯೊಬ್ಬರು ತಾಲೂಕಿನ ಅಂಜನಾಪುರ ಗ್ರಾಮದಲ್ಲಿರುವ ಪತ್ನಿಯ ಮನೆಗೆ ಮೇ 19ರಂದು ರಾತ್ರಿ ಬಂದು ತಂಗಿದ್ದಾರೆ. ಮರುದಿನ ಹೆಳವರಹುಂಡಿ ಗ್ರಾಮದಲ್ಲಿ ನಿಗದಿಯಾಗಿದ್ದ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಬಳಿಕ ಅವರಿಗೆ ಕರೊನಾ ಸೋಂಕು ಇರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಎರಡು ಗ್ರಾಮಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ತಾಪಂ ಇಒ ಶ್ರೀಕಂಠರಾಜೇ ಅರಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಡಿ.ಕಲಾವತಿ, ಡಾ.ನಾಗೇಂದ್ರ ಮಾಹಿತಿ ಕಲೆಹಾಕಿದರು.
ಹೆಳವರಹುಂಡಿಯಲ್ಲಿ 19 ಹಾಗೂ ಅಂಜನಾಪುರ ಗ್ರಾಮದಲ್ಲಿ 6 ಜನರು ಸೇರಿ 25 ಜನರನ್ನು ಸೌಲಭ್ಯ ಸಹಿತ ಕ್ವಾರಂಟೈನ್‌ನಲ್ಲಿ ಶುಕ್ರವಾರ ಇರಿಸಲಾಗಿದೆ. 350ಕ್ಕೂ ಹೆಚ್ಚು ಜನರು ದ್ವಿತೀಯ ಸಂಪರ್ಕದಲ್ಲಿರುವ ಕಾರಣ ಹೆಳವರಹುಂಡಿ ಹಾಗೂ ಅಂಜನಾಪುರ ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಸೋಂಕಿನಿಂದಾಗಿ ಬಳಲಿದ್ದ ನಂಜನಗೂಡಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರಿಗೆ ಸೋಂಕು ಕಂಡುಬಂದರೆ ದ್ವಿತೀಯ ಸಂಪರ್ಕದಲ್ಲಿರುವವರನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರೊನಾ ಸೋಂಕಿನಿಂದಾಗಿ 28 ನಿಯಂತ್ರಿತ ವಲಯಗಳನ್ನು ಗುರುತಿಸಿ ಸೀಲ್‌ಡೌನ್ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 28 ವಲಯಗಳಲ್ಲಿನ ಸೀಲ್‌ಡೌನ್ ತೆರವುಗೊಳಿಸಲಾಗಿತ್ತು. ಮೇ 23ರಂದು ಬ್ಯಾಳಾರು ಹಾಗೂ ಮೇ 27ಕ್ಕೆ ನಗರದ ಬಸವನಹುಡಿ ಬ್ಲಾಕ್ ಸೀಲ್‌ಡೌನ್ ತೆರವಾಗಲಿವೆ. ಸಿಡಿಪಿಒ ಅಧಿಕಾರಿ ಸಂಚರಿಸಿರುವುದರಿಂದ ಮತ್ತೆರಡು ಸೀಲ್‌ಡೌನ್ ಪ್ರದೇಶಗಳು ಸೃಷ್ಟಿಯಾಗಿವೆ.