ನ್ಯೂಸ್

ಧ್ರುವನಾರಾಯಣ ಕನಸು ನನಸು ಮಾಡಲು ಕೈಜೋಡಿಸಿ

ಸರಗೂರು: ನನ್ನ ರಾಜಕೀಯ ಗುರು ಆರ್.ಧ್ರುವನಾರಾಯಣ ಅವರನ್ನು ಕಳೆದುಕೊಂಡು ಇಡೀ ಕ್ಷೇತ್ರ ತಬ್ಬಲಿಯಾಗಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಅವರ ಕನಸನ್ನು ನನಸು ಮಾಡುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಶ್ರಮಿಸೋಣ ಎಂದು ಶಾಸಕ ಅನಿಲ್ ಚಿಕ್ಕಮಾದು ಕೋರಿದರು.

ಪಟ್ಟಣದಲ್ಲಿ ಸರಗೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಮಾಜಿ ಸಂಸದ ಆರ್.ಧ್ರುವನಾರಾಯಣ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾದ ನಂತರ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಗಳಿಸಿ ತಾಲೂಕಿನಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಆರ್.ಧ್ರುವನಾರಾಯಣ ಅವರನ್ನು ಕಳೆದುಕೊಂಡು ರಾಜಕೀಯವಾಗಿ ನನಗೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರಿಗೆ ಹೆಗ್ಗಡದೇವನಕೋಟೆ ಮತ್ತು ಜನತೆ ಬಗ್ಗೆ ಅಪಾರವಾದ ಗೌರವವಿತ್ತು. ತಾಲೂಕಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಇಂದು ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸಬೇಕಾಗಿದೆ. ಅವರ ಕನಸು ನನಸು ಮಾಡಲು ಈ ಬಾರಿ ಅನಿಲ್ ಚಿಕ್ಕಮಾದು ಮತ್ತು ದರ್ಶನ್ ಧ್ರುವನಾರಾಯಣರನ್ನೂ ವಿಧಾನಸಭಾ ಸದಸ್ಯರಾಗಿ ಆರಿಸುವ ಜವಾಬ್ದಾರಿ ಸರಗೂರು, ಹೆಗ್ಗಡದೇವನಕೋಟೆ ಹಾಗೂ ನಂಜನಗೂಡು ತಾಲೂಕಿನ ಜನರದು ಎಂದರು.

ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರದಾಸ್ ಮಾತನಾಡಿ, ಸರಗೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆದಿರುವುದರಿಂದ ಪಕ್ಷ ಸಂಘಟನೆಗೆ ತುಂಬ ಸಹಕಾರಿಯಾಗಿದೆ. ಪ್ರಸ್ತುತ ಚುನಾವಣೆ ಘೋಷಣೆಯಾಗಿರುವುದರಿಂದ ಯಾವುದೇ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಸರಿಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಜಿಪಂ ಮಾಜಿ ಸದಸ್ಯರಾದ ರವಿ, ಬೀರ್ವಾಳು ಬಸವರಾಜು, ಕೆಪಿಸಿಸಿ ಸದಸ್ಯರಾದ ಎಸ್.ಆರ್.ಜಯಮಂಗಳ, ರಾಜ್ಯ ಅಲ್ಪಸಂಖ್ಯಾತ ವಿಭಾಗದ ಸುಭಾನ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾದಪ್ಪ, ಸರಗೂರು ಟೌನ್ ಅಧ್ಯಕ್ಷ ನಾಗರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜು, ನಯಾಜ್, ಸಾಮಾಜಿಕ ಜಾಲತಾಣದ ಅಧ್ಯಕ್ಷ ಶಿವಲಿಂಗಯ್ಯ ಯಶವಂತಪುರ, ಪಟ್ಟಣ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಹೇಮಾವತಿ ರಮೇಶ, ಜಿ.ಪಂ ಮಾಜಿ ಸದಸ್ಯರಾದ ರವಿ.ಪಿ, ಭಾಗ್ಯಲಕ್ಷ್ಮೀ, ಚಿಕ್ಕವೀರನಾಯಕ, ಮಂಜುನಾಥ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಆನಂದ್, ಹಿಂದುಳಿದ ಘಟಕದ ಅಧ್ಯಕ್ಷ ಬೀರ್ವಾಳು ಚಿಕ್ಕಣ್ಣ, ಅಬ್ದುಲ್ ಜಲೀಲ್, ಮಹಿಳಾ ಘಟಕದ ಅಧ್ಯಕ್ಷರಾದ ರೇಖಾ, ಸೌಮ್ಯಾ ಮಂಜುನಾಥ್, ಮುಖಂಡರಾದ ಚಲುವರಾಜು, ಬೀರ್ವಾಳು ಬಸವರಾಜು, ನಟರಾಜಪ್ಪ, ಗುರುಮೂರ್ತಿ, ಭಾಸ್ಕರ್, ಪಪಂ ಮಾಜಿ ಅಧ್ಯಕ್ಷ ಸತೀಶ್ ಕುಮಾರ್, ಲೋಕೇಶ್ ಮುಳ್ಳೂರು, ಚಿನ್ನಸ್ವಾಮಿ, ಮರಿದೇವಯ್ಯ, ಸತೀಶ್‌ಗೌಡ, ಭೀಮರಾಜ್, ಕೋಟೆ ಟೌನ್ ಅಧ್ಯಕ್ಷ ಪ್ರಕಾಶ್, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಹಾಜರಿದ್ದರು.