ಶಿಕಾರಿಪುರ: ನಮ್ಮ ಧಾರ್ಮಿಕ ಪರಂಪರೆ ಮತ್ತು ಆಚರಣೆಗಳು ಈ ಮಣ್ಣಿನ ಸಂಸ್ಕೃತಿಯ ಪ್ರತಿರೂಪ. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದು ಕಡೇನಂದಿಹಳ್ಳಿ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪುರಸಭೆ ಮುಂಭಾಗದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಶರಭಿ ಗುಗ್ಗಳದಲ್ಲಿ ಆಶೀರ್ವಚನ ನೀಡಿದ ಅವರು, ನಾವು ಧರ್ಮ ರಕ್ಷಣೆ ಮಾಡಿದರೆ ಧರ್ಮ ಸದಾ ನೆರಳಾಗಿ ನಿಂತು ರಕ್ಷಣೆ ಮಾಡುತ್ತದೆ. ನಾವು ಎಂದಿಗೂ ಧರ್ಮ ಮಾರ್ಗದಿಂದ ವಿಮುಖರಾಗಬಾರದು. ಧರ್ಮ ಮಾರ್ಗವೆಂದರೆ ಅದು ರಾಜಮಾರ್ಗ ಎಂದರು.
ಪ್ರತಿವರ್ಷ ಶ್ರೀ ವೀರಭದ್ರೇಶ್ವರ ಗುಗ್ಗುಳ ಸಮಿತಿಯವರು ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗುಳ ಏರ್ಪಡಿಸುತ್ತಿರುವುದು ಶ್ಲಾಘನೀಯ. ಗುಗ್ಗಳ ಅತ್ಯಂತ ಪ್ರಾಚೀನವಾದ ದೈವ ಕಲೆ. ಅದೂ ಕೂಡ ನಶಿಸದ ಹಾಗೆ ನಾವು ಎಚ್ಚರ ವಹಿಸಬೇಕಿದೆ ಎಂದರು.
ಪರಶಿವನ ಅಂಶವಾಗಿರುವ ಶ್ರೀ ವೀರಭದ್ರ ದೇವರ ಆರಾಧನೆಯಿಂದ ಭಕ್ತರು ಸಂಕಷ್ಟಗಳಿಂದ ಮುಕ್ತರಾಗುತ್ತಾರೆ. ದೇವತಾರಾಧನೆಯು ಮನಸ್ಸನ್ನು ಪರಶುದ್ಧಗೊಳಿಸುತ್ತದೆ ಎಂದು ಹೇಳಿದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಮುದಿಗೌಡರ ಬೀದಿ ಹುಚ್ಚರಾಯಸ್ವಾಮಿ ದೇವಸ್ಥಾನ ರಸ್ತೆ, ರಥ ಬೀದಿಯ ಕಾನೂರು ಬಸವೇಶ್ವರ ದೇವಸ್ಥಾನ, ಹಳೆ ಆಸ್ಪತ್ರೆ ರಸ್ತೆಯಿಂದ ಜಗದ್ಗುರು ಶ್ರೀ ರೇಣುಕಾಚಾರ್ಯಮಂದಿರದಲ್ಲಿ ಗುಗ್ಗುಳ ಸಂಪನ್ನಗೊಂಡಿತು.
ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಜಗಜ್ಯೋತಿ ಬಸವೇಶ್ವರ ಯುವಬಳಗದ ಅಧ್ಯಕ್ಷ ವಿವೇಕ್ ದೂದಿಹಳ್ಳಿ, ಸಿದ್ದಲಿಂಗೇಶ್, ಯುವರಾಜ್, ಮಧುಕೇಶ್ವರ್, ಜಗದೀಶ್ ಕಾಯಿ, ವೀರಣ್ಣ, ಸುಧಾ ರವಿಕುಮಾರ್, ಜ್ಯೋತಿ, ಕವಿತಾ, ಜಯದೇವಯ್ಯ ಇತರರಿದ್ದರು