ತೀರ್ಥಹಳ್ಳಿ: ಪಶ್ಚಿಮಘಟ್ಟದ ನಿತ್ಯಹರಿದ್ವರ್ಣದ ಸುಂದರ ಮಡಿಲಿನಲ್ಲಿ ಜ್ಞಾನದ ಸಂಕೇತದಂತೆ ಎತ್ತರದ ಸ್ಥಾನದಲ್ಲಿ ಧಾರ್ಮಿಕ ಮತ್ತು ಪ್ರವಾಸಿ ಕೇಂದ್ರವಾಗಿರುವ ಕುಂದಾದ್ರಿ ಬೆಟ್ಟ ಆಚಾರ್ಯ ಶ್ರೀಕುಂದಕುಂದರು ತಪ್ಪಸ್ಸಿನ ಮೂಲಕ ಮನುಕುಲಕ್ಕೆ ದಿವ್ಯಜ್ಞಾನವನ್ನು ನೀಡಿದ ಮಹತ್ವದ ತಾಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮಕರ ಸಂಕ್ರಾಂತಿ ಅಂಗವಾಗಿ ಅತಿಶಯ ಶ್ರೀಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕ್ಷೇತ್ರವಾದ ಕುಂದಾದ್ರಿ ಬೆಟ್ಟದಲ್ಲಿ ಮಂಗಳವಾರ ಜರುಗಿದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಜೈನ ಪರಂಪರೆ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಜೈನಮುನಿ ಆಚಾರ್ಯ ಶ್ರೀಕುಂದಕುಂದರು ಗ್ರಂಥ ರಚಿಸಿದ ಮತ್ತು ಜಗತ್ತಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಿದ ಪುಣ್ಯಭೂಮಿಯೂ ಆಗಿದೆ. ಜೈನ ಸಮುದಾಯದವರಿಗೆ ಸೀಮಿತವಾಗಿರದ ಈ ಕ್ಷೇತ್ರಕ್ಕೆ ಎಲ್ಲ ಸಮುದಾಯದವರೂ ಆಗಮಿಸುತ್ತಾರೆ ಎಂದರು.
ಒಂದು ಕಾಲದಲ್ಲಿ ನಾವುಗಳೂ ಜೈನಪರಂಪರೆಗೆ ಸೇರಿದವರಾಗಿದ್ದೇವೆ. ಹಬ್ಬ ಹರಿದಿನ ಮತ್ತು ಶುಭ ಕಾರ್ಯಗಳಲ್ಲಿ ಹಿರಿಯರನ್ನು ಸ್ಮರಿಸಿ ಜೈನ ಎಡೆ ಇಡುವ ಪದ್ಧತಿ ಇಂದಿಗೂ ಈ ಭಾಗದಲ್ಲಿ ಆಚರಣೆಯಲ್ಲಿದೆ. ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಶ್ರೀಗಳು ಪೀಠಕ್ಕೆ ಬಂದ ಮೇಲೆ ಈ ಕ್ಷೇತ್ರ ಸಾಕಷ್ಟು ಅಭಿವೃದ್ಧಿಯಾಗಿದೆ. ಇಲ್ಲಿಗೆ ಬರುವವರು ಧಾರ್ಮಿಕ ಭಾವನೆಯೊಂದಿಗೆ ಪ್ರಕೃತಿಯನ್ನು ಆರಾಧಿಸಬೇಕೇ ಹೊರತು ಮೋಜು ಮಸ್ತಿ ನಡೆಸಿದಲ್ಲಿ ಶಾಪವಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಸಿದರು.
ಉಡುಪಿಯ ಪರಿಸರಾಸಕ್ತ ಪ್ರೊ. ಎಸ್.ಎ.ಕೃಷ್ಣಯ್ಯ, ತಾಳೆಗಿಡದ ಮಹತ್ವವನ್ನು ವಿವರಿಸಿ ತಾಳೆಗಿಡದ ಬೀಜ ಸಸಿಗಳನ್ನು ಹಾಗೂ ತಾಳೆಗರಿಗಳನ್ನು ಶ್ರೀಗಳಿಗೆ, ಶಾಸಕ ಆರಗ ಜ್ಞಾನೇಂದ್ರರಿಗೆ ನೀಡಿದರು. ಬೇರೆ ಊರುಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳಿಗೆ ಲಪುಷ್ಪ ಸಮರ್ಪಿಸಿದರು. ಧಾರ್ಮಿಕ ಮುಖಂಡರಾದ ಡಾ. ಜೀವಂಧರ ಜೈನ್ ಇದ್ದರು.