ಜಗದ್ಗುರು ಶೀ ವಿಧುಶೇಖರಭಾರತೀ ಸ್ವಾಮೀಜಿ. 
ನ್ಯೂಸ್

ಧಾರ್ಮಿಕ ಆಚರಣೆಗಳು ಎಲ್ಲರನ್ನೂ ಒಗ್ಗೂಡಿಸಲಿ

ಶೃಂಗೇರಿ: ತಾಲೂಕಿನಾದ್ಯಂತ ಯುಗಾದಿ ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಪ್ರತಿ ದೇವಾಲಯಗಳಲ್ಲೂ ವಿಶೇಷ ಪೂಜೆ ನಡೆಯಿತು. ಮನೆಯಂಗಳದಲ್ಲಿ ರಂಗೋಲಿ ಚಿತ್ತಾರ, ಬಾಗಿಲಿಗೆ ತಳಿರುತೋರಣ ಜತೆಗೆ ದೇವರ ಮನೆಯನ್ನು ಅಲಂಕೃತಗೊಳಿಸಿ ಹಿರಿಯರು ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ನಾನಾ ವಿಧದ ಪಲ್ಯಗಳು, ಪಾಯಸ, ಹೋಳಿಗೆಯನ್ನು ಮನೆಮಂದಿ ಸವಿದರು. ಸಂಜೆ ಹೊಸ ಬಟ್ಟೆ ತೊಟ್ಟು ದೇವಾಲಯಕ್ಕೆ ಭೇಟಿ ನೀಡಿದರು.

ಶೃಂಗೇರಿ ಶಾರದಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಯುಗಾದಿ ವಿಶೇಷ ಹಬ್ಬವಾಗಿದ್ದು ನೂತನ ವರುಷ ಆರಂಭವಾಗಲಿದೆ. ಪ್ರತಿಯೊಬ್ಬರು ಈ ವರ್ಷ ಅತ್ಯುತ್ತಮ ಕಾರ್ಯ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬೇಕು. ನಾವು ಸೂರ್ಯನ ಕಿರಣಗಳ ಕಾಂತಿಯ ಅನುಭವ ಪಡೆದಾಗ ನಮಗೆ ಚೈತನ್ಯಶಕ್ತಿ ಲಭಿಸುತ್ತದೆ. ಸರಿಯಾದ ಮಾರ್ಗದಲ್ಲಿ ಮುನ್ನಡೆದು ಎಲ್ಲರೂ ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಂಡಾಗ ಜೀವನ ಸಾರ್ಥಕ್ಯವಾಗುತ್ತದೆ. ಅಂತರಂಗದಲ್ಲಿ ಚೈತನ್ಯ ಶಕ್ತಿ ಬೆಳಗುತ್ತದೆ ಎಂದರು.

ಸುವರ್ಣ, ವಜ್ರ ಉನ್ನತವಾದ ವಸ್ತು. ವೈಭವ ಎಂದರೆ ವ್ಯರ್ಥವಾಗಿ ಹಣವನ್ನು ವ್ಯಯಿಸುವುದಲ್ಲ. ಶೃಂಗೇರಿ ಶ್ರೀಮಠದಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿ ಮೂಡಬೇಕು. ಧಾರ್ಮಿಕ ಆಚರಣೆಗಳು ಎಲ್ಲರನ್ನೂ ಒಗ್ಗೂಡಿಸಬೇಕು. ಶಾಸೋಕ್ತವಾಗಿ ಸಂಪ್ರದಾಯಕ್ಕೆ ಆದ್ಯತೆ ನೀಡುವ ಪ್ರತಿ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ಭಾಗಿಯಾಗಬೇಕು ಎಂಬುದು ಜಗದ್ಗುರುಗಳ ಆಶಯವಾಗಿದೆ ಎಂದರು.

ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಅವರ 75ನೇ ವರ್ಧಂತೋತ್ಸವ ಸಲುವಾಗಿ ಶ್ರೀಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಭಾರತೀ ಮಹೋತ್ಸವ ವೈಭವದಿಂದ ನಡೆದಿದೆ ಎಂದು ತಿಳಿಸಿದರು.