ನ್ಯೂಸ್

ಧಾರಾಕಾರ ಮಳೆಯಿಂದ ಸಾಕಷ್ಟು ಹಾನಿ

ಹನಗೋಡು ಭಾಗದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹುಣಸೂರು-ಹನಗೋಡು ಮುಖ್ಯರಸ್ತೆಯ ಹೊನ್ನೇನಹಳ್ಳಿ ಬಳಿ ಕಿರು ಸೇತುವೆ ಮೇಲೆ ಮಳೆ ನೀರು ಹರಿಯುತ್ತಿರುವುದು.

ಹನಗೋಡು: ಹನಗೋಡು ಭಾಗದಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ವಾಸದ ಮನೆಗಳು ಸೇರಿದಂತೆ ಅಂಗಡಿ-ಮುಂಗಟ್ಟುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಅಲ್ಲದೆ, ಜಮೀನಿನಲ್ಲಿರುವ ಶುಂಠಿ, ಜೋಳ, ಅಡಕೆ ಮತ್ತಿತರ ಬೆಳೆಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ಇದಲ್ಲದೆ ತಟ್ಟೆಕೆರೆ-ಹೈರಿಗೆ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.


ಹೈರಿಗೆ ರಸ್ತೆಯಲ್ಲಿರುವ ತಟ್ಟೆಕೆರೆ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ನಿಲುವಾಗಿಲು ಗ್ರಾಮದ ನಂಜುಂಡಸ್ವಾಮಿ ಎಂಬುವರಿಗೆ ಸೇರಿದ ಅಡಕೆ, ಬಾಳೆ, ತೆಂಗಿನ ತೋಟದಲ್ಲಿ ಸುಮಾರು 5 ಅಡಿಯಷ್ಟು ನೀರು ನಿಂತಿದೆ. ಹನಗೋಡು ಗ್ರಾಮದ ಚಾಮುಂಡೇಶ್ವರಿ ಗೊಬ್ಬರದ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ 30 ಚೀಲ ಫ್ಯಾಕ್ಟ್ 20-20, 10 ಚೀಲ ಡಿಎಪಿ, 10 ಚೀಲ ಅಮೋನಿಯಂ ಸಲ್ಪೇಟ್, 10 ಚೀಲ ಯೂರಿಯಾ ಸೇರಿದಂತೆ ಒಟ್ಟು 60 ಚೀಲ ಗೊಬ್ಬರ ನೀರಿನಲ್ಲಿ ತೋಯ್ದಿದೆ. ಇದಲ್ಲದೆ ಪಕ್ಕದ ಶ್ರೀಧರ್ ಎಂಬುವರಿಗೆ ಸೇರಿದ ಬೇಕರಿಯಲ್ಲಿ ಸಕ್ಕರೆ, ಮೈದಾ ಸೇರಿದಂತೆ ಬೇಕರಿ ತಿನಿಸುಗಳು ನೀರಿನಲ್ಲಿ ಕರಗಿ ಹೋಗಿವೆ. ಕಾಳಬೋಚಣೆ ಗ್ರಾಮದ ತೋಪೇಗೌಡ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಹತ್ತಿಯನ್ನು ಮನೆಯಲ್ಲಿ ಸಂಗ್ರಹಿಸಿಟ್ಟಿದ್ದು ರಾತ್ರಿ ಸುರಿದ ಭಾರಿ ಮಳೆಯ ನೀರು ಮನೆಗೆ ನುಗ್ಗಿ ಹತ್ತಿಯೆಲ್ಲ ನೀರಿನಲ್ಲಿ ತೊಯ್ದು ಹೋಗಿದೆ.


ಹುಣಸೂರು ತಾಲೂಕಿನ ಅತಿದೊಡ್ಡ ಕೆರೆಗಳಲ್ಲೊಂದಾದ ಹೈರಿಗೆ ಕೆರೆ ಕೋಡಿ ಬಿದ್ದು ಪ್ರವಾಹದ ರೀತಿಯಲ್ಲಿ ನೀರು ಹರಿಯುತ್ತಿದೆ. ಕೆರೆಯ ಅಚ್ಚುಕಟ್ಟು ಪ್ರದೇಶ ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗಿದೆ. ಹೈರಿಗೆ ಕೆರೆ ನೀರು ಉಕ್ಕಿ ಹರಿದು ರಸ್ತೆ ಹಾಳಾಗಿದೆ.


ಹುಣಸೂರು-ಹನಗೋಡು ಮುಖ್ಯರಸ್ತೆಯ ಹೊನ್ನೇನಹಳ್ಳಿ ಬಳಿ ಕಿರು ಸೇತುವೆ ಮೇಲೆ ಮಳೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕಿರು ಸೇತುವೆ ಮೇಲೆ ನೀರು ಹರಿಯುತ್ತಿರುವ ಸ್ಥಳಕ್ಕೆ ಶಾಸಕ ಎಚ್.ಪಿ. ಮಂಜುನಾಥ್, ಉಪ ವಿಭಾಗಾಧಿಕಾರಿ ವರ್ಣಿತ್ ನೇಗಿ, ತಹಸೀಲ್ದಾರ್ ಡಾ.ಅಶೋಕ್, ಲೋಕೋಪಯೋಗಿ ಇಲಾಖೆ ಎಇಇ ಭೋಜರಾಜ್, ಜೆಇ ಪ್ರಭಾಕರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.