ನ್ಯೂಸ್

ಧಾರವಾಡ ಗಾಯತ್ರಿಪುರಂ ನಿವಾಸಿಗಳಲ್ಲಿ ಆತಂಕ

ಧಾರವಾಡ: ಶತಮಾನ ಕಂಡ ನಗರದ ಕೆಲಗೇರಿ ಕೆರೆಯ ತಳಭಾಗದ ರಸ್ತೆಯು ಕುಸಿಯುತ್ತಿದ್ದು, ಪಕ್ಕದ ಗಾಯತ್ರಿಪುರಂ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕೆಲಗೇರಿ ರಸ್ತೆಯ ಒಂದು ಬದಿಗೆ ಜಲಮಂಡಳಿಯಿಂದ ಹಾಕಲಾಗಿದ್ದ ನೀರಿನ ಪೈಪ್ ಒಡೆದಿದೆ. ಜೊತೆಗೆ ಕೆರೆಯಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು, ಕೆಳ ಭಾಗದಲ್ಲಿ ನೀರು ಬಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರಿ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡಿದಾಗ ಆಗಾಗ ಮಣ್ಣು ಕುಸಿಯುತ್ತಿದೆ. ಹೀಗಾಗಿ ಈ ರಸ್ತೆಯ ಕೆಳಭಾಗದಲ್ಲಿರುವ ಗಾಯತ್ರಿಪುರಂನ ಹತ್ತಾರು ಮನೆಗಳ ನಿವಾಸಿಗಳು ಕೆರೆಯ ನೀರು ನುಗ್ಗುವ ಭಯದಲ್ಲಿದ್ದಾರೆ. ರಸ್ತೆಯ ಮೇಲೆ ‘ಹುಷಾರು... ಕೆಳಗಡೆ ಮಣ್ಣು ಕುಸಿಯುತ್ತಿದೆ’ ಎಂದು ನಾಮಫಲಕ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ನಾಗರೀಕರೆ ಈ ಎಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಆದರೆ ಈವರೆಗೂ ಪಾಲಿಕೆ ಅಥವಾ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಸಮಸ್ಯೆಗೆ ಕೂಡಲೇ ಪರಿಹಾರ ಕಲ್ಪಿಸಬೇಕು ಎಂದು ಗಾಯತ್ರಿಪುರಂ ನಿವಾಸಿಗಳು ಆಗ್ರಹಿಸಿದ್ದಾರೆ.