ನ್ಯೂಸ್

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜನರಿಗೆ ಉತ್ತಮ ಯೋಜನೆ

ಹಾಸನ: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜನರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣಕ್ಕೆ ಅದು ಜನಮಾನಸದಲ್ಲಿ ಯಾವಾಗಲೂ ಉಳಿಯುತ್ತದೆ ಎಂದು ಪಡುವಲಹಿಪ್ಪೆ ಎಚ್.ಡಿ.ದೇವೇಗೌಡ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ್ ಅವರು ಹೇಳಿದರು.
ನಗರದ ಮಹಾವೀರ ಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಶಾಂತಿಗ್ರಾಮ ಘಟಕದಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾವು ಪ್ರಪಂಚವನ್ನು ಒಂದಲ್ಲ ಒಂದು ದಿನ ಬಿಟ್ಟು ಹೋಗುತ್ತೇವೆ. ಆದರೆ ಜಗತ್ತು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲಸ ಮಾಡಬೇಕು. ಸೋಲುಗಳಿಗೆ ಸಾವಿರ ಕಾರಣ ಹೇಳುತ್ತೇವೆ. ಸಂಘ ಪ್ರಬಲವಾಗಿ ಬೆಳೆಯಬೇಕೆಂದರೆ ಹೊಂದಾಣಿಕೆ ಮುಖ್ಯ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಅವರು ಮಾತನಾಡಿ, ಉಳಿತಾಯ ಜೀವನದಲ್ಲಿ ತುಂಬಾ ಮುಖ್ಯವಾಗುತ್ತದೆ. ದೇಶ ಅಭಿವೃದ್ಧಿ ಆಗಬೇಕೆಂದರೆ ಸಮಾಜ ದುಶ್ಚಟಗಳಿಂದ ದೂರವಿರಬೇಕೆಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದರು. ಅದೇ ಮಾರ್ಗದಲ್ಲಿ ಧರ್ಮಸ್ಥಳ ಸಂಘ ಕೆಲಸ ಮಾಡುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಿದೆ. ಆದರೆ ಕೆಲವರು ಸಂಘದ ಕುರಿತು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಧರ್ಮಸ್ಥಳ ದೇವಸ್ಥಾನದಿಂದ ಯಾರಿಗೂ ಸಾಲ ನೀಡುತ್ತಿಲ್ಲ. ಜನರ ದುಡ್ಡನ್ನು ಜನರಿಗೆ ಕೊಡುವ ಕೆಲಸ ಮಾಡುತ್ತಿದೆ. ಬ್ಯಾಂಕ್‌ಗಳಿಂದ ಸ್ವಸಹಾಯ ಸಂಘಗಳ ಮೂಲಕ ಸಾಲ ನೀಡಲಾಗುತ್ತಿದೆ. ಇಲ್ಲಿ ದೇವಸ್ಥಾನದ ಪಾತ್ರ ಎಳ್ಳಷ್ಟೂ ಇಲ್ಲ ಎಂದರು.
ಸಂಘಗಳಲ್ಲಿ ಸಾಲ ಪಡೆದವರು ನಿಗದಿತ ಸಮಯಕ್ಕೆ ಪಾವತಿಸಬೇಕು. ಇತ್ತೀಚೆಗೆ ಮೈಕ್ರೋ ಪೈನಾನ್ಸ್‌ಗಳು ಸಾಲ ನೀಡಲು ಮನೆ ಬಾಗಿಲಿಗೆ ಬರುತ್ತವೆ. ಆದರೆ ಅದು ಭಾರೀ ದುಷ್ಪರಿಣಾಮ ಬೀರುತ್ತದೆ. ಸುಲಭವಾಗಿ ಸಾಲ ಸಿಗುತ್ತದೆಂದು ಮೋಸ ಹೋಗಬಾರದು ಎಂದು ಕಿವಿಮಾತು ಹೇಳಿದರು.
ಶಾಂತಿಗ್ರಾಮ ಕ್ಷೇತ್ರ ಯೋಜನಾಧಿಕಾರಿ ನವೀನ್ ಕುಮಾರ್ ಅವರು ಮಾತನಾಡಿ, ಮೂರು ವರ್ಷದಿಂದ ಶಾಂತಿಗ್ರಾಮ ಯೋಜನಾ ಕಚೇರಿ ಕರ್ತವ್ಯ ನಿರ್ವಹಿಸುತ್ತಿದೆ. ನಮಗೆ ಒಳ್ಳೆ ಕೆಲಸ ಮಾಡಲು ಧರ್ಮಸ್ಥಳ ಧರ್ಮಾಧಿಕಾರಿ ಪ್ರೇರಣೆ ಆಗಿದ್ದಾರೆ. ಶಾಂತಿಗ್ರಾಮ ಯೋಜನೆಯಡಿ 20 ಜನ ಕಾಯಂ, 40 ಸೇವಾ ಪ್ರತಿನಿಧಿಗಳು, 25 ಗ್ರಾಮ ಮಟ್ಟದ ಸೇವಾಗಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2162 ಸ್ವಸಹಾಯ ಸಂಘಗಳಿದ್ದು 16 ಸಾವಿರ ಸದಸ್ಯರಿದ್ದಾರೆ. ಆರ್ಥಿಕ ಮಾತ್ರವಲ್ಲದೆ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಸಹ ಮಾಡುತ್ತಿದ್ದೇವೆ. ಇಲ್ಲಿವರೆಗೆ 11.15 ಕೋಟಿ ರೂ.ಉಳಿತಾಯವಾಗಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲ ಆಗಲಿ ಎಂದು ಪ್ರಗತಿ ನಿಧಿಯನ್ನು ನೀಡುತ್ತಿದ್ದೇವೆ. ಈವರೆಗೆ 214 ಕೋಟಿ ರೂ. ಪ್ರಗತಿ ನಿಧಿಯನ್ನು ಕರ್ಣಾಟಕ ಬ್ಯಾಂಕ್ ಮೂಲಕ ನೀಡಿದ್ದೇವೆ. 84 ಕೋಟಿ ರೂ. ಹೊರ ಬಾಕಿಯಿದೆ ಎಂದು ಹೇಳಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬೊಮ್ಮೇಗೌಡ ಮಾತನಾಡಿ, ಯೋಜನೆ ಒಂದು ಸರ್ಕಾರ ನಿರ್ವಹಿಸುವಂತಹ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಯೋಜನೆಯಲ್ಲಿನ ಶಿಸ್ತಿನಿಂದ ಕಾರ್ಯಕ್ರಮಗಳ ಲಾಭ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದೆ. ಇನ್ನು ಹತ್ತು ಹಲವು ಯೋಜನೆಗಳು, ಕಾರ್ಯಕ್ರಮಗಳು ಎಸ್‌ಡಿಆರ್‌ಡಿಯಿಂದ ಸಮಾಜಕ್ಕೆ ದೊರೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳಾದ ಎಂ.ಆರ್.ಗೌಡಪ್ಪ, ದಿನೇಶ್, ಶಿವಾನಂದ, ತೌಷತಕುಮಾರ್, ಕರ್ಣಾಟಕ ಬ್ಯಾಂಕ್‌ನ ಕೃಷಿ ವಿಭಾಗದ ಅಧಿಕಾರಿ ಶಿರಿಷಾ, ಯೋಜನೆಯ ತಾಲೂಕು ಯೋಜನಾಧಿಕಾರಿ ನವೀನ್, ಜ್ಞಾನ ವಿಕಾಸ ಯೋಜನೆ ಸಮನ್ವಯಾಧಿಕಾರಿ ಹಂಸವೇಣಿ ಇತರರಿದ್ದರು.