ಚನ್ನರಾಯಪಟ್ಟಣ : ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಧರ್ಮ ರಕ್ಷಣಾ ವೇದಿಕೆ ಹಾಗೂ ವಿವಿಧ ಪಕ್ಷಗಳ ಮುಖಂಡರು ಶನಿವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ವಿಶ್ವಾದ್ಯಂತ ಭಕ್ತರನ್ನು ಹೊಂದಿರುವ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಅದರದ್ದೇ ಆದ ಪಾವಿತ್ರೃ ಇದೆ. ಹಿಂದು ಧರ್ಮೀಯರ ಪಾಲಿನ ಪುಣ್ಯ ಕ್ಷೇತ್ರಕ್ಕೆ ಕಳಂಕ ತರಲು ಗಿರೀಶ ಮಟ್ಟಣ್ಣನವರ, ಮಹೆಶ ಶೆಟ್ಟಿ ತಿಮರೋಡಿ, ಟಿ. ಜಯಂತ್ ಹಾಗೂ ಇವರಿಗೆ ಬೆಂಗಾವಲಾಗಿ ನಿಂತಿರುವವರು ಸೇರಿ ಒಳಸಂಚು ನಡೆಸಿರುವ ಸಾಧ್ಯತೆ ಇದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೈಯಲ್ಲಿ ಭಿತ್ತಿಪತ್ರ ಹಿಡಿದು ಧರ್ಮಸ್ಥಳ ಪುಣ್ಯಕ್ಷೇತ್ರವಾಗಿದ್ದು, ಅದಕ್ಕೆ ಅಪಮಾನ ಮಾಡುವುದು ಸರಿಯಲ್ಲ. ಧರ್ಮಸ್ಥಳ ಉಳಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿ ತಾಲೂಕು ಕಚೇರಿವರೆಗೆ ಪಾದಯಾತ್ರೆ ಮಾಡಿ, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮಾತನಾಡಿ, ಎಸ್‌ಐಟಿ ಅನಾಮಿಕ ಸೂಚಿಸಿದ ಎಲ್ಲ ಜಾಗಗಳನ್ನು ಅಗೆದಿದೆ. ಯಾವ ಜಾಗದಲ್ಲೂ ಅಸ್ಥಿಪಂಜರಗಳ ಗೋಚರವಿಲ್ಲ, ಇದರಿಂದ ಈಗಾಗಲೇ ಜನಸಾಮಾನ್ಯರಿಗೆ ಅನಾಮಿಕ ಆರೋಪ ಸತ್ಯಕ್ಕೆ ದೂರವಾದದ್ದು ಎಂಬ ನಂಬಿಕೆ ಬರತೊಡಗಿದೆ. ಕ್ಷೇತ್ರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ಸಮಾಜಮುಖಿ ಕಾರ್ಯಗಳನ್ನು ಬೆಂಬಲಿಸಿ ಪಟ್ಟಣದಿಂದ ಆ.23 ರಂದು ಸಾವಿರಾರು ಜನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದು ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ಮಾತನಾಡಿ, ಪ್ರಸ್ತುತದ ಪ್ರಕರಣ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ವಿಚಾರಣೆಯನ್ನು ಭಕ್ತರು ವಿರೋಧಿಸುವುದಿಲ್ಲ. ಆದರೆ, ಸುಳ್ಳು ದೂರುಗಳನ್ನು ದಾಖಲಿಸಿದವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಈಗಾಗಲೇ ಸರ್ಕಾರ ಎಸ್‌ಐಟಿ ತನಿಖೆ ಕೈಗೊಂಡಿದೆ. ವೀರೇಂದ್ರ ಹೆಗ್ಗಡೆ ತನಿಖೆ ಸ್ವಾಗತಿಸಿದ್ದಾರೆ. ಎಸ್‌ಐಟಿ ತನಿಖಾ ವರದಿ ಬರದೇ ಇದ್ದರೂ, ಧರ್ಮಸ್ಥಳ, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಯುಟ್ಯೂಬ್, ಸೇರಿ ಇತರ ಜಾಲತಾಣಗಳಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಕೆಲ ಕಿಡಿಗೇಡಿಗಳು ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ದೊಡ್ಡ ಮಟ್ಟದ ಷಡ್ಯಂತ್ರ : ಹಿಂದುಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸಲು ದೊಡ್ಡಮಟ್ಟದ ಷಡ್ಯಂತ್ರವೊಂದು ನಡೆದಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಆರೋಪ ಹೊರಿಸಿ, ಕ್ಷೇತ್ರದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆದಿದೆ. ಸೌಜನ್ಯಾಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕ್ಷೇತ್ರ ಧರ್ಮಸ್ಥಳದ ಮೇಲೆ ದಾಳಿಗೆ ಹೊರಟ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ್, ಎಂ.ಡಿ.ಸಮೀರ್, ಸಂತೋಷ ಶೆಟ್ಟಿ, ಟಿ. ಜಯಂತ, ಅಜಯ್ ಅಂಚನ್ ಷಡ್ಯಂತ್ರ ಹಾಗೂ ಅಪಪ್ರಚಾರ ಮಾಡುತ್ತಿರುವುದರ ಹಿನ್ನೆಲೆ ಏನು? ಈ ತಂಡಕ್ಕೆ ಹಣಕಾಸಿನ ನೆರವು ಎಲ್ಲಿಂದ ಬರುತ್ತಿದೆ? ಎಂಬುದನ್ನು ತಿಳಿಯಲು ಸೂಕ್ತ ತನಿಖೆ ನಡೆಸಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ ಒತ್ತಾಯಿಸಿದರು.