ನ್ಯೂಸ್

ಧರ್ಮಗುರುಗಳ ಆಶೀರ್ವಾದ ಪಡೆದ ಜಿ.ಡಿ.ಹರೀಶ್‌ಗೌಡ

ಹುಣಸೂರು: ಶಾಸಕ ಜಿ.ಡಿ.ಹರೀಶ್‌ಗೌಡ ತಾಲೂಕಿನ ಮಠಮಾನ್ಯಗಳಿಗೆ ಭೇಟಿ ನೀಡಿ ಗುರು-ಹಿರಿಯರ ಆಶೀರ್ವಾದ ಪಡೆದರು.


ಶನಿವಾರ ತಾಲೂಕಿನ ಮಾದಳ್ಳಿ ಉಕ್ಕಿನಕಂತೆ ಮಠ, ನಗರದ ವಿವಿಧ ಭಾಗಗಳಲ್ಲಿರುವ ಮಸೀದಿಗಳು, ಚರ್ಚ್‌ಗಳಿಗೆ ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದರು.


ಮಾದಳ್ಳಿ ಮಠದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ತಾಲೂಕಿನ ಜನತೆ ತಮ್ಮನ್ನು ಬೆಂಬಲಿಸುವ ಮೂಲಕ ಆಶೀರ್ವದಿಸಿ ಶಾಸಕನನ್ನಾಗಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆಯೇ ತಾಲೂಕಿನ ಜ್ವಲಂತ ಸಮಸ್ಯೆಗಳ ಕುರಿತು ನಾನು ತಿಳಿದುಕೊಂಡಿದ್ದೆ. ಇದೀಗ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದರು.


ಮುಂದಿನ ಸೋಮವಾರದಿಂದ ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಿಂದ ಮತದಾರರಿಗೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ಜತೆಗೆ ಜನರ ಅಹವಾಲು ಆಲಿಸಿ ಸ್ಥಳದಲ್ಲೇ ಪರಿಹರಿಸುವುದಕ್ಕೆ ಕ್ರಮ ವಹಿಸಲಾಗುವುದು. ಜನರ ಸಹಕಾರವೊಂದನ್ನೇ ನಾನು ನಿರೀಕ್ಷಿಸುತ್ತಿದ್ದು, ತಾಲೂಕಿನ ಅಭಿವೃದ್ಧಿಗೆ ನನ್ನದೇ ಆದ ಆಲೋಚನೆಗಳನ್ನು ಹೊಂದಿದ್ದೇನೆ ಎಂದು ತಿಳಿಸಿದರು.


ಮಠದ ಶ್ರೀ ಸಾಂಬಸದಾಶಿವಸ್ವಾಮೀಜಿ ಆಶೀರ್ವಚನ ನೀಡಿ, ಬದಲಾವಣೆ ಜಗದ ನಿಯಮ. ತಾಲೂಕಿನ ಜನತೆ ಯುವನಾಯಕನನ್ನು ಆರಿಸಿದ್ದಾರೆ. ತಾಲೂಕಿನ ಸರ್ವ ಜನರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವತ್ತಾ ಶಾಸಕ ಜಿ.ಡಿ.ಹರೀಶ್‌ಗೌಡ ಗಮನಹರಿಸಲಿ ಎಂದರು.


ಜೆಡಿಎಸ್ ತಾಲೂಕು ಅಧ್ಯಕ್ಷ ದೇವರಾಜ್ ಒಡೆಯರ್, ನಗರಾಧ್ಯಕ್ಷ ಫಜಲುಲ್ಲಾ, ಮುಖಂಡ ಹರವೆ ಶ್ರೀಧರ್, ಪಕ್ದ ವಕ್ತಾರರಾದ ಹರ್ಷವರ್ಧನ್, ಎಂ.ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯ ಎಂ.ಬಿ.ಸುರೇಂದ್ರ, ಸುಭಾಷ್ ಇತರರು ಇದ್ದರು.
ಇದೇ ವೇಳೆ ನಗರದ ಬಜಾರ್ ರಸ್ತೆಯ ಜಾಮಿಯ ಮಸೀದಿ, ಪೋಸ್ಟ್‌ಆಫೀಸ್ ಬಳಿಯ ಕ್ಯಾಥೋಲಿಕ್ ಚರ್ಚಗಳಿಗೆ ಭೇಟಿ ನೀಡಿ ಧರ್ಮ ಗುರುಗಳ ಆಶೀರ್ವಾದ ಪಡೆದರು. ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ನೂತನ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.