ನ್ಯೂಸ್

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪುನರ್ವಸತಿ

ದಾವಣಗೆರೆ : ನಗರದಲ್ಲಿ 2 ಸ್ವಾಧಾರ ಗೃಹ ಹಾಗೂ 1 ರಾಜ್ಯ ಮಹಿಳಾ ನಿಲಯ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಅನೈತಿಕ ಸಾಗಾಣಿಕೆಯಲ್ಲಿ ರಕ್ಷಿಸಲಾದ ಮಹಿಳೆಯರ ಪುನರ್ವಸತಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೂಚಿಸಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ, ಕೇಂದ್ರ ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿ ಅನ್ವಯ ಸ್ವಾಧಾರ ಗೃಹ ಹಾಗೂ ಉಜ್ವಲ ಕೇಂದ್ರಗಳನ್ನು ವಿಲೀನಗೊಳಿಸಿ ಶಕ್ತಿ ಸದನ ಕೇಂದ್ರಗಳನ್ನಾಗಿ ಸರ್ಕಾರದಿಂದ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದರು.
 ಅವರಿಗೆ ಸೂಕ್ತ ಕಾನೂನು ನೆರವು, ವೈದ್ಯಕೀಯ ಸಹಾಯ, ವೃತ್ತಿ ತರಬೇತಿಯನ್ನು ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಮೂಲಕ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
 ನೊಂದ ಮಹಿಳೆಯರೊಂದಿಗೆ ಸಂವಾದ ನಡೆಸುವ ಮೂಲಕ ಸಾಂತ್ವನ ನೀಡಲು ಮನಃಶಾಸ್ತ್ರಜ್ಞರು ಹಾಗೂ ನುರಿತ ಸಮಾಲೋಚಕರೊಂದಿಗೆ ಸಂಪರ್ಕ ಇಟ್ಟುಕೊಂಡು ಮಹಿಳೆಯರ ಶ್ರೇಯೋಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಹೇಳಿದರು.
 ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ. ಕರೆಣ್ಣ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ. ಕೋಟ್ರೇಶ್, ಹೆಚ್ಚುವರಿ ಎಸ್ಪಿ ಮಂಜುನಾಥ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.