ನ್ಯೂಸ್

ದೊಡ್ಡಹೊಮ್ಮದಲ್ಲಿ ಉಸಿರುಗಟ್ಟಿಸಿ ಪತ್ನಿ ಕೊಲೆ

ನಂಜನಗೂಡು: ತಾಲೂಕಿನ ದೊಡ್ಡಹೊಮ್ಮ ಗ್ರಾಮದಲ್ಲಿ ಬುಧವಾರ ರಾತ್ರಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.


ಗ್ರಾಮದ ರಾಮಯ್ಯ ಪುತ್ರಿ ರೂಪಾ(35) ಪತಿಯಿಂದಲೇ ಕೊಲೆಯಾದವರು. ಪತಿ ಪುರುಷೋತ್ತಮ(45) ಆರೋಪಿ.


6 ವರ್ಷದ ಹಿಂದೆ ರೂಪಾ ಅವರನ್ನು ಕೆಸ್ತೂರು ಗ್ರಾಮದ ಪುರುಷೋತ್ತಮನಿಗೆ ಮದುವೆ ಮಾಡಿಕೊಡಲಾಗಿತ್ತು. ಈತ ದೊಡ್ಡಹೊಮ್ಮ ಗ್ರಾಮದಲ್ಲೇ ಗಾರೆ ಕೆಲಸ ಮಾಡಿಕೊಂಡು ವಾಸವಿದ್ದನು. ಮಹಿಳಾ ಸ್ವಸಹಾಯ ಸಂಘದಲ್ಲಿ 1 ಲಕ್ಷ ರೂ.ಸಾಲ ತೆಗೆದುಕೊಡುವಂತೆ ಪೀಡಿಸುತ್ತಿದ್ದರೂ ಒಪ್ಪದ ಕಾರಣ ಪತ್ನಿಯ ಮಾಂಗಲ್ಯ ಸರವನ್ನೇ ಕಿತ್ತುಕೊಂಡಿದ್ದನು. ಈ ಬಗ್ಗೆ ಗ್ರಾಮಸ್ಥರು ಪುರುಷೋತ್ತಮನಿಗೆ ಬುದ್ಧಿವಾದ ಹೇಳಿ ಹೊಂದಿಕೊಂಡು ಬಾಳುವಂತೆ ಸೂಚಿಸಿದ್ದರಾದರೂ ಆತ ಬದಲಾಗಿರಲಿಲ್ಲ.


ಬುಧವಾರ ಮತ್ತೆ ಪತ್ನಿ ಜತೆ ದುಡ್ಡಿಗಾಗಿ ಜಗಳ ಆರಂಭಿಸಿದ್ದ ಪುರುಷೋತ್ತಮ, ತಂದೆ ಹತ್ತಿರ ಹಣವನ್ನು ಕೊಡಿಸು, ಇಲ್ಲವಾದಲ್ಲಿ ನಿನ್ನ ಮೈ ಮೇಲೆ ಇರುವ ಒಡವೆಯನ್ನಾದರೂ ಬಿಚ್ಚಿಕೊಡು ಎಂದು ಗಲಾಟೆ ತೆಗೆದಿದ್ದನು. ಗಲಾಟೆ ಮಧ್ಯರಾತ್ರಿವರೆಗೂ ನಡೆದಿತ್ತು. ಈ ನಡುವೆ, ರೂಪಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ ಎಂದು ಮೃತಳ ತಂದೆ ರಾಮಯ್ಯ ಕವಲಂದೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪುರುಷೋತ್ತಮನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.