ನ್ಯೂಸ್

ದೊಡ್ಡರಸಿನಕೆರೆಯಲ್ಲಿ ದಿ.ಅಂಬರೀಷ್ ಪುಣ್ಯಸ್ಮರಣೆ

ಕೆ.ಎಂ.ದೊಡ್ಡಿ: ಮಾಜಿ ಸಂಸದ, ನಟ ದಿವಂಗತ ಅಂಬರೀಷ್ ಅಭಿಮಾನಿಗಳ ಮನದಲ್ಲಿ ಇನ್ನು ಜೀವಂತವಾಗಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ಅಂಬಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಅಂಬರೀಷ್ ಅವರ 5 ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಸೂರ್ಯ, ಚಂದ್ರ ಇರುವರೆಗೂ ಅಂಬರೀಶ್ ಅವರ ನೆನಪುಗಳು ಅಜರಾಮರಾಗಿರುತ್ತವೆ ಎಂದು ಭಾವುಕರಾದರು.


ಮಂಡ್ಯದಲ್ಲಿ ಅಂಬರೀಷ್ ಫೌಂಡೇಷನ್‌ಗೆ ಶೀಘ್ರ ಚಾಲನೆ ದೊರೆಯಲಿದ್ದು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು ವೇದಿಕೆಯಾಗಲಿದೆ. ಜಿಲ್ಲೆಯನ್ನು ಮಾದರಿಯಾಗಿಸುವ ಕನಸು ಕಂಡಿದ್ದ ಅಂಬರೀಷ್ ಅವರನ್ನು ನೆನಪಿಸಿಕೊಳ್ಳದವರು ಯಾರೂ ಇಲ್ಲ. ಅವರು ಮಾಡಿದ ಜನಪರ ಕಾರ್ಯಗಳನ್ನು ಜನರು ಇಂದಿಗೂ ಮರೆತಿಲ್ಲ. ಅಭಿಮಾನಿಗಳ ಸೇವಾ ಕಾರ್ಯಗಳಿಗೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.


ಪುತ್ರನ ಚಿತ್ರಕ್ಕೆ ಹಾರೈಕೆ: ಅಂಬರೀಷ್ ಅವರ ಪುಣ್ಯ ಸ್ಮರಣೆ ದಿನವೇ ನನ್ನ ಪುತ್ರ ಅಭಿಷೇಕ್ ಅಂಬರೀಷ್ ಅಭಿನಯದ ಬ್ಯಾಡ್ ಮ್ಯಾನರ್ಸ್‌ ಸಿನಿಮಾ ಬಿಡುಗಡೆಯಾಗಿರುವುದು ತುಂಬ ಖುಷಿ ಕೊಟ್ಟಿದೆ. ಅಂಬಿ ಆಶೀರ್ವಾದದಿಂದಲೇ ಈ ಚಿತ್ರ ಬಿಡುಗಡೆಯಾಗುತ್ತಿದೆ ಎನ್ನಬಹುದು. ಅಂಬರೀಷ್‌ಗೆ ತೋರಿದ ಪ್ರೀತಿಯನ್ನು ಅಭಿಗೂ ತೋರಿಸಿ, ಅವನನ್ನು ಚಿತ್ರರಂಗದಲ್ಲಿ ಬೆಳೆಸಿ ಎಂದು ಕೋರಿದರು.


ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬರೀಷ್ ಸಹೋದರನ ಪುತ್ರ ಮದನ್, ಜಿ.ಪಂ. ಮಾಜಿ ಅಧ್ಯಕ್ಷ ವಿವೇಕಾನಂದ, ಮುಟ್ಟನಹಳ್ಳಿ ಮಹೇಂದ್ರ, ದೊಡ್ಡರಸಿನಕೆರೆ ರಘು, ಕೇಬಲ್ ಮಹೇಶ್, ಅಂಬರೀಷ್ ಅಭಿಮಾನಿಗಳು ಭಾಗವಹಿಸಿದ್ದರು.